ಮಂಡ್ಯ : ಆರೋಗ್ಯದಲ್ಲಿ ಆದ ಏರುಪೇರಿನಿಂದ ವಿಶ್ರಾಂತಿ ಕಡೆಗೆ ಜಾರಿದ್ದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ಬರೋಬ್ಬರಿ 100 ದಿನಗಳ ಬಳಿಕ, ಇಂದು ಅವರ ಸ್ವಕ್ಷೇತ್ರವಾದ ಮಂಡ್ಯಗೆ ಹೋಗಲಿದ್ದಾರೆ.
ಇಂದು ಮಂಡ್ಯದ ಪೇಟೆ ಬೀದಿಯಲ್ಲಿ ನಿರ್ಮಾಣವಾಗಿರುವ ಜಯಚಾಮರಾಜೇಂದ್ರ ಒಡೆಯರ್ ಮಾರುಕಟ್ಟೆಯ ಉದ್ಘಾಟನೆಗೆ ಹೆಚ್.ಡಿ.ಕುಮಾರಸ್ವಾಮಿ ಅವರು ಆಗಮಿಸಲಿದ್ದಾರೆ.
ಮೂರು ತಿಂಗಳ ಹಿಂದೆ ಹೆಚ್‌ಡಿಕೆ ಮಂಡ್ಯದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ದಿಶಾ ಸಭೆಯನ್ನು ನಡೆಸಿದ್ದರು. ಆದಾದ ಬಳಿಕ ಅವರಿಗೆ ಆರೋಗ್ಯ ಸಮಸ್ಯೆಗಳು ಎದುರಾಗಿದ್ದವು.
ಹೀಗಾಗಿ ಕುಮಾರಸ್ವಾಮಿ ಅವರು ವಿಶ್ರಾಂತಿ ಕಡೆಗೆ ಜಾರಿದ್ದರು. ಈ ವೇಳೆ ಹೆಚ್‌ಡಿಕೆ ಅವರ ದಿಢೀರ್ ತೂಕ ಇಳಿಕೆ, ಸೊರಗಿದ ದೇಹ ಕಂಡು ಕಾರ್ಯಕರ್ತರಲ್ಲಿ ಆತಂಕ ಮೂಡಿದ್ದವು.
ಇದೀಗ ಆರೋಗ್ಯ ಸುಧಾರಿಸಿರುವ ಬೆನ್ನಲ್ಲೇ ಇಂದು ನೂರು ದಿನಗಳ ಬಳಿಕ ಕುಮಾರಸ್ವಾಮಿ ಮಂಡ್ಯಗೆ ಆಗಮಿಸಲಿದ್ದು, ಜೆಡಿಎಸ್ ಕಾರ್ಯಕರ್ತರು, ಕುಮಾರಸ್ವಾಮಿ ಅಭಿಮಾನಿಗಳು ಅವರನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.















