ಮನೆ ರಾಜ್ಯ ಬಿಜೆಪಿಯ ಅಭ್ಯರ್ಥಿಗಳ ಪಟ್ಟಿ ಪ್ರಕಟ – ಸಿಂಗರ್‌ ಮೈಥಿಲಿ ಠಾಕೂರ್‌ಗೂ ಟಿಕೆಟ್‌

ಬಿಜೆಪಿಯ ಅಭ್ಯರ್ಥಿಗಳ ಪಟ್ಟಿ ಪ್ರಕಟ – ಸಿಂಗರ್‌ ಮೈಥಿಲಿ ಠಾಕೂರ್‌ಗೂ ಟಿಕೆಟ್‌

0

ಪಾಟ್ನಾ : ಮುಂಬರುವ ಬಿಹಾರ ವಿಧಾನಸಭೆ ಚುನಾವಣೆಗೆ ಬಿಜೆಪಿ ತನ್ನ 18 ಅಭ್ಯರ್ಥಿಗಳ 3ನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಒಟ್ಟಾರೆ 3 ಹಂತಗಳಲ್ಲಿ 101 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟ ಮಾಡಿದೆ. ಹಲವು ಹೊಸ ಮುಖಗಳಿಗೆ ಬಿಜೆಪಿ ಮಣೆ ಹಾಕಿದೆ.

ಬಿಜೆಪಿ ಮೊದಲ ಪಟ್ಟಿಯಲ್ಲಿ 71 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿತ್ತು. 2ನೇ ಪಟ್ಟಿಯಲ್ಲಿ 12 ಹಾಗೂ 3ನೇ ಪಟ್ಟಿಯಲ್ಲಿ 18 ಅಭ್ಯರ್ಥಿಗಳ ಹೆಸರನ್ನ ಪ್ರಕಟಿಸಿದೆ. ಅಂತಿಮ ಪಟ್ಟಿಯಲ್ಲಿ ಖ್ಯಾತ ಗಾಯಕಿ ಮೈಥಿಲಿ ಠಾಕೂ‌ರ್‌ರಿಗೆ ಆಲಿನಗರ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ.

ಬಿಜೆಪಿ 101 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಿದ್ದು, 17 ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಿದೆ. ಇನ್ನೂ ಜೆಡಿಯು ಕೂಡ 101 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಿದೆ. ಉಳಿದಂತೆ ಚಿರಾಗ್‌ ಪಾಸ್ವಾನ್‌ ನೇತೃತ್ವದ ಎಲ್‌ಜೆಪಿ 29, ಎಚ್‌ಎಎಂ 6 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಿದೆ.

ಇಂಡಿಯಾ ಮೈತ್ರಿಕೂಟದ ಕಾಂಗ್ರೆಸ್, ಆರ್‌ಜೆಡಿ ಪಕ್ಷಗಳು ಅಧಿಕೃತವಾಗಿ ಯಾವುದೇ ಅಭ್ಯರ್ಥಿಗಳನ್ನ ಘೋಷಣೆ ಮಾಡಿಲ್ಲ. ಇನ್ನೂ ಸೀಟು ಹಂಚಿಕೆ ಕಸರತ್ತು ನಡೆಯುತ್ತಿದೆ. ಆದ್ರೆ ಕಾಂಗ್ರೆಸ್‌ ಸೀಟು ಹಂಚಿಕೆಗೆ ಮುನ್ನವೇ 16 ಅಭ್ಯರ್ಥಿಗಳ ಹೆಸರು ಪ್ರಕಟಿಸಿದೆ.

ಈ ಬಾರಿ ಬಿಹಾರದಲ್ಲಿ 2 ಹಂತದಲ್ಲಿ ಚುನಾವಣೆ ನಡೆಯಲಿದೆ. ನವೆಂಬರ್‌ 6ರಂದು ಮೊದಲ ಹಾಗೂ ನವೆಂಬರ್‌ 11 ರಂದು 2ನೇ ಹಂತದ ಮತದಾನ ನಡೆಯಲಿದ್ದು, ನ.14ರಂದು ಫಲಿತಾಂಶ ಪ್ರಕಟವಾಗಲಿದೆ.

ಈ ಬಾರಿ ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್‌ಕುಮಾರ್‌ ನೇತೃತ್ವದ ಎನ್‌ಡಿಎ ಮತ್ತು ಆರ್‌ಜೆಡಿ ನೇತೃತ್ವದ ಮಹಾಘಟಬಂಧನ್ ಮಧ್ಯೆ ನೇರ ಸ್ಪರ್ಧೆ ಏರ್ಪಟ್ಟಿದೆ. ಎನ್‌ಡಿಎ ಪ್ರಸ್ತುತ 131 ಸ್ಥಾನಗಳನ್ನು ಹೊಂದಿದ್ದರೆ ವಿರೋಧ ಪಕ್ಷ 111 ಸ್ಥಾನಗಳನ್ನು ಹೊಂದಿದೆ.

ಇನ್ನುಳಿದಂತೆ ಬಿಜೆಪಿ 80, ಜೆಡಿ(ಯು) 45, ಎಚ್‌ಎಎಂ(ಎಸ್) 4 ಮತ್ತು ಇಬ್ಬರು ಸ್ವತಂತ್ರರು ಎನ್‌ಡಿಎಗೆ ಬಲ ನೀಡಿದರೆ ಆರ್‌ಜೆಡಿ 77, ಕಾಂಗ್ರೆಸ್ 19, ಸಿಪಿಐ(ಎಂಎಲ್) 11, ಸಿಪಿಐ(ಎಂ) 2 ಮತ್ತು ಸಿಪಿಐ 2 ಸ್ಥಾನ ಹೊಂದಿದೆ.