ಮನೆ ರಾಜ್ಯ ಆಸ್ಪತ್ರೆಯಲ್ಲಿ ನಟಿ ಸಂಗೀತಾ ಭಟ್, ಮಹಿಳೆಯರಿಗೆ ನೀಡಿದ್ದಾರೆ ಮುಖ್ಯ ಸಂದೇಶ

ಆಸ್ಪತ್ರೆಯಲ್ಲಿ ನಟಿ ಸಂಗೀತಾ ಭಟ್, ಮಹಿಳೆಯರಿಗೆ ನೀಡಿದ್ದಾರೆ ಮುಖ್ಯ ಸಂದೇಶ

0

ʼಎರಡನೇ ಸಲ’, ‘ದಯವಿಟ್ಟು ಗಮನಿಸಿ’, ಇತ್ತೀಚೆಗಿನ ‘ಕಮಲ್ ಶ್ರೀದೇವಿ’ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ನಟಿ ಸಂಗೀತಾ ಭಟ್ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬಹಳ ಸಕ್ರಿಯವಾಗಿರುವ ಈ ನಟಿ ಇದೀಗ ಇದೀಗ ತಮ್ಮ ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದ ಕೆಲ ಮಾಹಿತಿ ಹಾಗೂ ತಮ್ಮ ಕೆಲವು ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ತಮ್ಮ ಅನಾರೋಗ್ಯವನ್ನು ಗುಟ್ಟಾಗಿಡದೆ ಅದರ ಬಗ್ಗೆ ಮಾತನಾಡಿ ಜಾಗೃತಿ ಮೂಡಿಸುವ ಪ್ರಯತ್ನವನ್ನು ಸಂಗೀತಾ ಭಟ್ ಮಾಡಿದ್ದು, ಇತ್ತೀಚೆಗೆ ತಾವು ಒಳಗಾದ ಶಸ್ತ್ರಚಿಕಿತ್ಸೆ ಬಗ್ಗೆ ತಮ್ಮ ಇನ್​​ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಸಂಗೀತಾ ಭಟ್ ಕಳೆದ ಹಲವು ತಿಂಗಳುಗಳಿಂದ ಋತು ಚಕ್ರಕ್ಕೆ ಸಂಬಂಧಿಸಿದ ಸಮಸ್ಯೆಯಿಂದ ಬಳಲುತ್ತಿದ್ದರಂತೆ. ವೈದ್ಯರನ್ನು ಸಂಪರ್ಕಿಸಿದಾಗ ಕೆಲ ಪರೀಕ್ಷೆಗಳ ಬಳಿಕ ಗರ್ಭಕೋಶದಲ್ಲಿ 1.75 ಸೆ.ಮೀ ಉದ್ದದ ಗೆಡ್ಡೆಯೊಂದು ಬೆಳೆದಿರುವುದು ತಿಳಿದು ಬಂದಿದೆ.

ಈ ಗೆಡ್ಡೆಯಿಂದಾಗಿ ಸಂಗೀತಾ ಭಟ್ ಸಾಕಷ್ಟು ನೋವು, ಅತಿಯಾದ ರಕ್ತಸ್ರಾವ ಇನ್ನೂ ಹಲವು ರೀತಿಯ ದೈಹಿಕ, ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದರಂತೆ. ಕೊನೆಗೆ ವೈದ್ಯರ ಸಲಹೆ ಮೇರೆಗೆ ಮದರ್​​ಹುಡ್ ಆಸ್ಪತ್ರೆಯಲ್ಲಿ ‘ಹಿಸ್ಟ್ರೋಸ್ಟೋಫಿಕ್ ಪಾಲಿಪೆಕ್ಟ್ರೊಮಿ’ ಹೆಸರಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಈ ಬಗ್ಗೆ ಬರೆದುಕೊಂಡಿರುವ ನಟಿ ಸಂಗೀತಾ, ‘ಈ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕಾ ಬೇಡವಾ ಎಂಬುದನ್ನು ನಿರ್ಧರಿಸಲು ಒಂದು ತಿಂಗಳು ಸಮಯ ಹಿಡಿಯಿತು. ಒಪ್ಪಿಕೊಂಡಿದ್ದ ಕೆಲಸಗಳನ್ನು, ಕೆಲ ಜವಾಬ್ದಾರಿಗಳನ್ನು ಮುಗಿಸಿ ನಾನು ಶಸ್ತ್ರಚಿಕಿತ್ಸೆಗೆ ಮುಂದಾಗಬೇಕಿತ್ತು. ಆದರೆ ಕೊನೆಗೆ ನಾನು ನನ್ನ ದೇಹದ ಕರೆಗೆ ಓಗೊಟ್ಟೆ’ ಎಂದಿದ್ದಾರೆ.

ಸಂಗೀತಾ ಭಟ್ ಹೇಳಿರುವಂತೆ ಅವರ ರೀತಿಯ ಸಮಸ್ಯೆ ಉಳ್ಳ ಮಹಿಳೆಯರಿಗೆ ಸಾಕಷ್ಟು ಸಮಸ್ಯೆಗಳಿಂದ ಬಳಲುತ್ತಾರಂತೆ. ಈ ಸಮಸ್ಯೆ ಉಳ್ಳವರಿಗೆ ಅತಿಯಾದ ರಕ್ತಸ್ರಾವ ಆಗುತ್ತದೆ. ಕಿಬ್ಬೊಟ್ಟೆ ಭಾಗದಲ್ಲಿ ಅಸಹನೀಯ ನೋವು ಇರುತ್ತದೆ. ಋತುಚಕ್ರ ಅಸಹಜವಾಗಿರುತ್ತದೆ. ಅತಿಯಾದ ಸುಸ್ತು ಕಾಡುತ್ತದೆ. ನಿರಾಸಕ್ತಿ ಮೂಡುತ್ತದೆ. ದೇಹದ ತೂಕ ಹೆಚ್ಚಳವಾಗುತ್ತದೆ, ಕೂದಲು ಉದುರುವಿಕೆ ಸಹ ಆಗುತ್ತದೆ’ ಎಂದಿದ್ದಾರೆ.

‘ಚಿಕಿತ್ಸೆ ಪಡೆದುಕೊಳ್ಳುವುದು ಎಂದರೆ ಅದು ಬಲಹೀನತೆ ಅಲ್ಲ ಬದಲಿಗೆ ಅದು ಧೈರ್ಯ, ನಿಮ್ಮ ದೇಹಕ್ಕೆ ಸ್ಪಂದಿಸುವ ರೀತಿ. ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳು ನಮ್ಮ ಪಾಲಿಗೆ ಅತ್ಯಂತ ಕಠಿಣ ದಿನಗಳಾಗಿದ್ದವು. ಪ್ರತಿ ನಿಮಿಷವೂ ವರ್ಷಗಳಂತೆ ಕಳೆದವು’ ಎಂದಿದ್ದಾರೆ. ಜೊತೆಗೆ ಪತಿ ಸುದರ್ಶನ್ ಮತ್ತು ವೈದ್ಯ ರೋಹಿತಾ ಅವರಿಗೆ ಧನ್ಯವಾದ ಹೇಳಿದ್ದಾರೆ.

ಸಂಗೀತಾ ಭಟ್ ಅವರ ಪೋಸ್ಟ್​​ಗೆ ನಟಿ ರಕ್ಷಿತಾ ಪ್ರೇಮ್ ಅವರು ಪ್ರತಿಕ್ರಿಯೆ ನೀಡಿದ್ದು, ‘ಜೀವನ ಒಂದು ಯುದ್ಧ, ಸೋಲದೆ ಬಂದ ಎಲ್ಲವನ್ನೂ ಎದುರಿಸುವುದು ಒಂದೇ ದಾರಿ. ನಾನು ಸಹ ಅದನ್ನು ಕಠಿಣ ರೀತಿಯಲ್ಲಿ ಕಲಿತಿದ್ದೇನೆ. ನಿಮ್ಮ ಈ ಪಯಣವು ಮಾನಸಿಕವಾಗಿ ಮತ್ತು ಹೆಚ್ಚಾಗಿ ಭಾವನಾತ್ಮಕವಾಗಿ ತುಂಬಾ ಕಷ್ಟಕರವಾಗಿತ್ತು ಎಂಬುದನ್ನು ನಾನು ಬಲ್ಲೆ. ನಿಮ್ಮ ಪ್ರೀತಿಯ ಸಂಗಾತಿಯ ನೆರವಿನಿಂದ ನೀವು ಎಲ್ಲದರಿಂದ ನಗುತ್ತಾ ಹೊರಬಂದಿದ್ದೀರಿ ಎಂದು ನಂಬಿದ್ದೇನೆ. ನಿಮ್ಮ ಬಗ್ಗೆ ತುಂಬಾ ಹೆಮ್ಮೆಯಿದೆ’ ಎಂದಿದ್ದಾರೆ.