ಮನೆ ರಾಜ್ಯ ಛಲವಾದಿ, ಈಶ್ವರಪ್ಪಗೆ ನೀಡಿದ್ದ ಭದ್ರತೆ ವಾಪಸ್ ಪಡೆದ ಸರ್ಕಾರ

ಛಲವಾದಿ, ಈಶ್ವರಪ್ಪಗೆ ನೀಡಿದ್ದ ಭದ್ರತೆ ವಾಪಸ್ ಪಡೆದ ಸರ್ಕಾರ

0

ಬೆಂಗಳೂರು : ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮತ್ತು ಈಶ್ವರಪ್ಪ ಮನೆಗೆ ನೀಡಿದ್ದ ಭದ್ರತೆಯನ್ನು ಸರ್ಕಾರ ವಾಪಸ್ ಪಡೆದುಕೊಂಡಿದೆ. ಮಾಧ್ಯಮಗಳ ಜೊತೆ ಮಾತನಾಡಿದ ಛಲವಾದಿ, ಈಗ ನಮ್ಮ ಮನೆಗೆ ಬೆಂಗಾವಲು ರಕ್ಷಕರನ್ನು ಕೊಟ್ಟಿದ್ದರು. ಭದ್ರತಾ ದೃಷ್ಟಿಯಿಂದ ಕೊಡಲೇ ಬೇಕು.

ಆದರೆ ಮೂವರು ಭದ್ರತಾ ಸಿಬ್ಬಂದಿಯನ್ನು ವಾಪಸ್ ಪಡೆದಿದ್ದಾರೆ. ಇದರ ಹಿಂದೆ ಪ್ರಿಯಾಂಕ್ ಖರ್ಗೆ ಇದ್ದಾರೆ. ನನಗೆ ಏನಾದರೂ ಆದರೆ ಸರ್ಕಾರ ಎಷ್ಟು ಹೊಣೆಯೋ, ಪ್ರಿಯಾಂಕ್ ಖರ್ಗೆ ಕುಟುಂಬವೂ ಕೂಡ ಹೊಣೆ ಎಂದು ಆಕ್ರೋಶ ಹೊರಹಾಕಿದರು.

ಇವರ ಭ್ರಷ್ಟಾಚಾರ ಎತ್ತಿ ತೋರಿಸುವ ಕೆಲಸ ವಿಪಕ್ಷ ನಾಯಕರು ಮಾಡಬಾರದು ಎಂಬ ನಿರ್ಧಾರಕ್ಕೆ ಸರ್ಕಾರ ಬಂದಿದೆ. ನಾನು ವಿಪಕ್ಷ ನಾಯಕನಾಗಿ ಒಂದೂವರೆ ವರ್ಷ ಆಗುತ್ತಿದೆ. ಇಲ್ಲಿವರೆಗೂ ಸರ್ಕಾರಿ ಗೃಹ ಕೊಟ್ಟಿಲ್ಲ. ಇದೇ ಸ್ಥಾನದಲ್ಲಿ ಸಿದ್ದರಾಮಯ್ಯ ಇದ್ದಾಗ ಜಗಳ ಮಾಡಿ ಮನೆ ತೆಗೆದುಕೊಂಡಿದ್ದರು. ನನಗೆ ಕೊಟ್ಟ ಭದ್ರತೆಯನ್ನು ವಾಪಸ್ ಪಡೆದಿದ್ದು ಯಾಕೆ? ಇದಕ್ಕೆ ಗೃಹ ಸಚಿವರು ಉತ್ತರ ಕೊಡಲೇಬೇಕು. .

ಇಲ್ಲದೇ ಇದ್ದರೆ ನನಗೆ ಕೊಟ್ಟಿರುವ ಕಾರು, ಬೆಂಗಾವಲು,ಭದ್ರತಾ ಸಿಬ್ಬಂದಿ ಎಲ್ಲರನ್ನೂ ವಾಪಸ್ ಕಳುಹಿಸುತ್ತೇನೆ. ಪ್ರಿಯಾಂಕ್ ಖರ್ಗೆ ಮನೆಗೆ ಬೆದರಿಕೆ ಬಂದಿದೆ ಎಂದು ಮತ್ತಷ್ಟು ಭದ್ರತೆ ಅವರ ಮನೆಗೆ ನೀಡಿದ್ದಾರೆ. ನನ್ನ ಭದ್ರತೆ ವಾಪಸ್ ಪಡೆದು, ಅವರಿಗೆ ಭದ್ರತೆ ಹೆಚ್ಚಿಸಿದ್ದಾರೆ ಎಂದು ಹೇಳಿದರು.

ನನಗೆ ಯಾವುದೇ ರಕ್ಷಣೆ ಬೇಡ. ನನಗೆ ಏನೇ ಆದರೂ ಖರ್ಗೆ ಹಾಗೂ ಅವರ ಕುಟುಂಬವೇ ಕಾರಣ ಆಗಲಿದೆ. ಈ ರೀತಿ ಟಾರ್ಗೆಟ್ ಮಾಡುವುದು ಸರಿಯಲ್ಲ ಎಂದು ಪ್ರಿಯಾಂಕ್ ಖರ್ಗೆ ವಿರುದ್ದ ಛಲವಾದಿ ನಾರಾಯಣಸ್ವಾಮಿ ಕಿಡಿ ಕಾರಿದರು.