ಬೆಂಗಳೂರು : ಬಿಹಾರ ಚುನಾವಣೆಯ ನಂತರ ಸಂಪುಟ ಪುನಾರಚನೆ ನಡೆಯುವ ಸಾಧ್ಯತೆ ಹಿನ್ನೆಲೆಯಲ್ಲಿ ದೀಪಾವಳಿ ಹಬ್ಬದ ನೆಪದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ನಿವಾಸದ ಮುಂದೆ ಶಾಸಕರ ಪರೇಡ್ ಆರಂಭವಾಗಿದೆ.
ಹಬ್ಬದ ಶುಭ ಕೋರಲು ಶಾಸಕರು ಪೈಪೋಟಿ ನಡೆಸುತ್ತಿದ್ದು ಎರಡೂ ಪವರ್ ಸೆಂಟರ್ ಬ್ಯಾಲೆನ್ಸ್ ಮಾಡುವ ಅನಿವಾರ್ಯತೆಗೆ ಸಿಕ್ಕಿದ್ದಾರೆ. ಇಬ್ಬರ ನಿವಾಸಕ್ಕೂ ಭೇಟಿ ನೀಡಿ ಹಬ್ಬದ ಶುಭಾಶಯ ಹೇಳಿ ಇಬ್ಬರ ಬಳಿಯೂ ಪರೋಕ್ಷವಾಗಿ ಸಂಪುಟ ವಿಸ್ತರಣೆ / ಪುನಾರಚನೆಯ ಪ್ರಸ್ತಾಪ ಇಡುತ್ತಿದ್ದಾರೆ.
ಪ್ರಸ್ತಾಪ ಇಡುವುದರ ಜೊತೆಗೂ ತಮಗೂ ಕ್ಯಾಬಿನೆಟ್‌ನಲ್ಲಿ ಅವಕಾಶ ನೀಡುವಂತೆ ಕೇಳುತ್ತಿದ್ದಾರೆ. ಹೊಸ ಹುದ್ದೆಯ ನಿರೀಕ್ಷೆಯಲ್ಲಿ ಶಾಸಕರ ತೆರಮರೆಯ ಪೈಪೋಟಿ ಜೋರಾಗಿದೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಸಿಎಂ ಸಿದ್ದರಾಮಯ್ಯ ಸಚಿವರಿಗೆ ಆಯೋಜಿಸಿದ ಡಿನ್ನರ್ ಸಭೆಯಲ್ಲಿ ಸಂಪುಟ ಪುನಾರಚನೆಯ ಸುಳಿವು ನೀಡಿದ್ದರು ಎನ್ನಲಾಗುತ್ತಿದೆ.
ಬಿಹಾರ ವಿಧಾನಸಭಾ ಚುನಾವಣೆಯ ನಂತರ ಡಿಸೆಂಬರ್‌ನಲ್ಲಿ ಸಂಪುಟ ಪುನನಾಚನೆ ನಡೆದರೆ, ಸಂಪುಟದಿಂದ ಕೈಬಿಟ್ಟರೆ, ಪಕ್ಷದಲ್ಲಿ ಪರ್ಯಾಯ ಹುದ್ದೆಗಳೊಂದಿಗೆ ಅವರಿಗೆ ಗೌರವಯುತವಾಗಿ ಬೀಳ್ಕೊಡುಗೆ ನೀಡಲಾಗುವುದು ಎಂದು ಸಿಎಂ ತಿಳಿಸಿದ್ದರು.
ಪಕ್ಷದ ಹೈಕಮಾಂಡ್ ಪ್ರಸ್ತುತ ಬಿಹಾರ ಚುನಾವಣೆಗಳಲ್ಲಿ ನಿರತವಾಗಿದೆ. ಹೈಕಮಾಂಡ್ ಅನುಮೋದಿಸಿದರೆ, ಆಡಳಿತಕ್ಕೆ ಶಕ್ತಿ ತುಂಬಲು 12-15 ಸಚಿವರನ್ನು ಹೊಸ ಮುಖಗಳೊಂದಿಗೆ ಬದಲಾಯಿಸುವ ಸಾಧ್ಯತೆಯಿದೆ.














