ಹಾಸನ : ಗೋಲ್ಡನ್ ಪಾಸ್ ಪಡೆದು, ಸರತಿ ಸಾಲಿನಲ್ಲಿ ನಿಂತು ನಟ ಧ್ರುವ ಸರ್ಜಾ ಹಾಸನಾಂಬೆ ದರ್ಶನ ಪಡೆದಿದ್ದಾರೆ. ತಂದೆ ಹಾಗೂ ಸ್ನೇಹಿತರ ಜೊತೆ ಹಾಸನಾಂಬ ದೇವಾಲಯಕ್ಕೆ ಆಗಮಿಸಿದ ಧ್ರುವ ಸರ್ಜಾ, ಸರತಿ ಸಾಲಿನಲ್ಲಿ ಬಂದು ದೇವಸ್ಥಾನದ ಬಳಿ ಬರುತ್ತಿದ್ದಂತೆ ಸರತಿ ಸಾಲಿನಿಂದ ಹೊರಬಂದು ನಂತರ ಮುಖ್ಯದ್ವಾರದ ಮೂಲಕ ದೇವಸ್ಥಾನಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದಿದ್ದಾರೆ.
ಹಾಸನಾಂಬ ದೇವಿ ಸಾರ್ವಜನಿಕ ದರ್ಶನಕ್ಕೆ ಇಂದು ಹದಿಮೂರು ಹಾಗೂ ಕಡೆಯ ದಿನವಾಗಿದ್ದು, ಹಿಂದೆಂದೂ ಕಾಣದಷ್ಟು ಭಕ್ತಗಣ ಆಗಮಿಸಿದೆ. ಬೆಳಗ್ಗೆ 6 ಗಂಟೆಯಿಂದ ದೇವಿ ದರ್ಶನ ಆರಂಭವಾಗಿದ್ದು, ಸರತಿ ಸಾಲುಗಳಲ್ಲಿ ನಿಂತು ಸಹಸ್ರಾರು ಭಕ್ತರು ದೇವಿ ದರ್ಶನ ಪಡೆಯುತ್ತಿದ್ದಾರೆ. ಧರ್ಮ ದರ್ಶನ, 1000 ರೂ., 300 ರೂ. ಹಾಗೂ ವಿಶೇಷ ದರ್ಶನದ ಸರತಿ ಸಾಲುಗಳಲ್ಲಿ ಜನಜಂಗುಳಿ ಉಂಟಾಗಿದೆ.
ಇಂದು ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 7 ಗಂಟೆಯವರೆಗೆ ಭಕ್ತರು ಅಪಾರ ಸಂಖ್ಯೆಯಲ್ಲಿ ಆಗಮಿಸಿ ನಿರಂತರವಾಗಿ ದೇವಿಯ ದರ್ಶನ ಪಡೆದಿದ್ದಾರೆ. ಇಂದು ರಾತ್ರಿ 7ರಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಗರ್ಭಗುಡಿಯ ಬಾಗಿಲು ಬಂದ್ ಆಗಿರಲಿದೆ.
ರಾತ್ರಿ 7 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ದೇವಿ ದರ್ಶನ ಇರುವುದಿಲ್ಲ. ಮಧ್ಯರಾತ್ರಿ 12 ಗಂಟೆಯಿಂದ ನಾಳೆ ಬೆಳಗ್ಗೆ 5 ಗಂಟೆಯವರೆಗೆ ಸ್ಥಳೀಯರಿಗೆ ಹಾಗೂ ಸಾರ್ವಜನಿಕರಿಗೆ ದರ್ಶನವಿರಲಿದೆ. ನಾಳೆ ಶಾಸ್ತ್ರೋಕ್ತವಾಗಿ ಹಾಸನಾಂಬ ದೇವಿ ಗರ್ಭಗುಡಿ ಬಾಗಿಲು ಮುಚ್ಚಲಿದೆ.















