ಡಬ್ಲಿನ್ (Dublin): ಐರ್ಲೆಂಡ್ ವಿರುದ್ಧದ ಮೊದಲ ಟಿ20 ಕ್ರಿಕೆಟ್ ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ.
ನಿನ್ನೆ ನಡೆದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯಾ ನೇತೃತ್ವದ ಭಾರತ ತಂಡವು ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮಳೆಯ ಕಾರಣ ತಡವಾಗಿ ಆರಂಭವಾದ ಪಂದ್ಯದಲ್ಲಿ ಓವರ್ಗಳ ಸಂಖ್ಯೆಯನ್ನು 12ಕ್ಕೆ ಇಳಿಸಲಾಯಿತು. ಮೊದಲು ಬ್ಯಾಟ್ ಮಾಡಿದ ಐರ್ಲೆಂಡ್, ಹ್ಯಾರಿ ಟೆಕ್ಟರ್ ಅವರ ಬಿರುಸಿನ ಅರ್ಧಶತಕದ ನೆರವಿನಿಂದ ನಿಗದಿತ ಓವರ್ಗಳಲ್ಲಿ 4 ವಿಕೆಟ್ಗೆ 108 ರನ್ ಗಳಿಸಿತು. ಸವಾಲಿನ ಗುರಿ ಬೆನ್ನತ್ತಿದ ಭಾರತ ತಂಡವು 9.2 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 111 ರನ್ ಪೇರಿಸಿತು.
ಭಾರತದ ಆರಂಭಿಕ ಆಟಗಾರ ದೀಪಕ್ ಹೂಡಾ, 29 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್ ಸಹಿತ 47 ರನ್ ಗಳಿಸಿ ಅಜೇಯರಾಗಿ ಉಳಿದರು. ಅವರೊಂದಿಗೆ ಇಶಾನ್ ಕಿಶನ್ (11 ಎಸೆತಗಳಲ್ಲಿ 26 ರನ್) ಮತ್ತು ಹಾರ್ದಿಕ್ ಪಾಂಡ್ಯಾ (12 ಎಸೆತಗಳಲ್ಲಿ 24 ರನ್) ಗೆಲುವಿಗೆ ಸಹಕಾರಿಯಾದರು. ಮೂರನೇ ಕ್ರಮಾಂಕದಲ್ಲಿ ಆಡಿದ ಸೂರ್ಯಕುಮಾರ್ ಯಾದವ್ ರನ್ ಖಾತೆ ತೆರೆಯದೆಯೇ ಹೊರ ನಡೆದರು. ಐರ್ಲೆಂಡ್ ಪರ ಕ್ರೈಗ್ ಯಂಗ್ ಎರಡು ವಿಕೆಟ್ ಗಳಿಸಿದರು.
ಐರ್ಲೆಂಡ್ ತಂಡ 22 ರನ್ ಗಳಿಸುವಷ್ಟರಲ್ಲಿ ಮೂರು ವಿಕೆಟ್ ಕಳೆದುಕೊಂಡು ಕುಸಿತ ಅನುಭವಿಸಿತ್ತು. ಈ ಹಂತದಲ್ಲಿ ಜತೆಯಾದ ಟೆಕ್ಟರ್ ಮತ್ತು ಲಾರ್ಸನ್ ಟಕ್ಟರ್ ತಂಡಕ್ಕೆ ಆಸರೆಯಾದರು. ಭಾರತದ ಬೌಲಿಂಗ್ ದಾಳಿಯನ್ನು ದಿಟ್ಟವಾಗಿ ಎದುರಿಸಿದ ಟೆಕ್ಟರ್ 33 ಎಸೆತಗಳಲ್ಲಿ 64 ರನ್ ಗಳಿಸಿದರು. ಆರು ಬೌಂಡರಿ ಮತ್ತು ಮೂರು ಸಿಕ್ಸರ್ ಸಿಡಿಸಿದರು. ಟೆಕ್ಟರ್ 16 ಎಸೆತಗಳಲ್ಲಿ ಎರಡು ಬೌಂಡರಿಗಳ ನೆರವಿನಿಂದ 18 ರನ್ ಗಳಿಸಿದರು.
ಭಾರತದ ಪರ ಭುವನೇಶ್ವರ್ ಕುಮಾರ್, ಹಾರ್ದಿಕ್ ಪಾಂಡ್ಯ, ಆವೇಶ್ ಖಾನ್ ಹಾಗೂ ಯಜುವೇಂದ್ರ ಚಾಹಲ್ ತಲಾ ಒಂದು ವಿಕೆಟ್ ಕಬಳಿಸಿದರು.
ಭಾರತ ಮತ್ತು ಐರ್ಲೆಂಡ್ ಎರಡು ಪಂದ್ಯಗಳ ಟಿ20 ಸರಣಿ ಆಡುತ್ತಿವೆ.
ಸಂಕ್ಷಿಪ್ತ ಸ್ಕೋರ್:ಐರ್ಲೆಂಡ್ 4ಕ್ಕೆ 108 ರನ್ (12 ಓವರ್), ಹ್ಯಾರಿ ಟೆಕ್ಟರ್–64 ರನ್ಭಾರತ 3ಕ್ಕೆ 111 ರನ್ (9.2 ಓವರ್), ದೀಪಕ್ ಹೂಡಾ–47 ರನ್.