ಮನೆ ರಾಜ್ಯ ಚಿಕ್ಕಮಗಳೂರು: ಕನಿಷ್ಟ ಮೂಲ ಸೌಕರ್ಯಗಳಿಂದ ವಂಚಿತರಾದ 49ಕ್ಕೂ ಹೆಚ್ಚು ಆದಿವಾಸಿ ಕುಟುಂಬಗಳು

ಚಿಕ್ಕಮಗಳೂರು: ಕನಿಷ್ಟ ಮೂಲ ಸೌಕರ್ಯಗಳಿಂದ ವಂಚಿತರಾದ 49ಕ್ಕೂ ಹೆಚ್ಚು ಆದಿವಾಸಿ ಕುಟುಂಬಗಳು

0

ಚಿಕ್ಕಮಗಳೂರು(Chikkamagaluru): ತಲೆಗೆ ಸೂರಿಲ್ಲದೇ, ಕುಡಿಯಲು ಶುದ್ದ ನೀರು, ರಸ್ತೆ, ವಿದ್ಯುತ್ ಸೌಕರ್ಯ ಸೇರಿದಂತೆ ಕನಿಷ್ಟವಾಗಿ ಅಗತ್ಯವಿರುವ ಮೂಲ ಸೌಕರ್ಯಗಳಿಂದಲೂ ವಂಚಿತರಾಗಿ  ಕಳೆದ ಮೂರು ವರ್ಷಗಳಿಂದ ಆದಿವಾಸಿ ಬುಡಕಟ್ಟು ಸಮುದಾಯ 49ಕ್ಕೂ ಹೆಚ್ಚು ಕುಟುಂಬಗಳು ದಿನದೂಡುತ್ತಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ, ಮೂಡಿಗೆರೆ ತಾಲೂಕಿನ ಕಳಸ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾವಿನಕೆರೆ ಗ್ರಾಮದ ಎಂ ಪಿ ಕುಮಾರಸ್ವಾಮಿ (ಕುಂಬಳಡಿಕೆ) ಬಡಾವಣೆ ದುಸ್ಥಿತಿ ಇದು.

ಮೂರು ವರ್ಷಗಳ ಹಿಂದೆ ಅತಿವೃಷ್ಟಿ ಸಂದರ್ಭದಲ್ಲಿ ನಿರ್ಗತಿಕರ ನಿವೇಶನಕ್ಕೆ ಮಾವಿನಕೆರೆ ಗ್ರಾಮದ ಸರ್ವೆ ನಂ. 153ರಲ್ಲಿ 12 ಎಕರೆ ಗೋಮಾಳ ಜಾಗ ಮಂಜೂರಾಗಿತ್ತು. ನಿವೇಶನಗಳನ್ನು ಹಂಚಿಕೆ ಮಾಡಿ ಉಳಿದಿದ್ದ 4 ಎಕರೆ ಪ್ರದೇಶದಲ್ಲಿ ಸುತ್ತಮುತ್ತಲಿನ ನಿರ್ಗತಿಕರು, ಎಸ್ಟೇಟ್‌ಗಳಿಂದ ಹೊರಹಾಕಲ್ಪಟ್ಟ ಆದಿವಾಸಿ ಬುಡಕಟ್ಟು, ಪರಿಶಿಷ್ಟ ಜಾತಿ ಹಾಗೂ ಇತರೆ ಸಮುದಾಯದ ಬಡ ಜನರು ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಿಕೊಂಡು ಮೂರು ವರ್ಷಗಳಿಂದ ವಾಸ ಮಾಡುತ್ತಿದ್ದಾರೆ.

ಬಸ್ ವ್ಯವಸ್ಥೆ ಇಲ್ಲದೇ ನಿವಾಸಿಗಳು, ಮಕ್ಕಳ ಪರದಾಟ:

ಕಳಸದಿಂದ 3 ಕಿ.ಮೀ ದೂರವಿರುವ ಕುಂಬಳಡಿಕೆಯಲ್ಲಿ ಹೆಸರಿಗೊಂದು ರಸ್ತೆಯಿದ್ದರೂ, ಡಾಂಬರು ಕಂಡಿಲ್ಲ. ಯಾವುದೇ ಬಸ್ ವ್ಯವಸ್ಥೆ ಇಲ್ಲ.  ಅಗತ್ಯ ವಸ್ತುಗಳ ಖರೀದಿ ಅಥವಾ ಇನ್ನಿತರ ಕೆಲಸ ಕಾರ್ಯಗಳಿಗೆ ಪಟ್ಟಣಕ್ಕೆ  ತೆರಳಲು ಖಾಸಗಿ ಆಟೋರಿಕ್ಷಗಳ ಮೊರೆಹೋಗಬೇಕಾದ ಅನಿವಾರ್ಯತೆ ಇದೆ. ಮಕ್ಕಳು ಶಾಲೆಗೆ ಹೋಗಲು ಕೂಡ 1.5 ಕಿ.ಮೀ ನಡೆಯಬೇಕಾದ ಸ್ಥಿತಿ ಇದೆ.

ಬಡಾವಣೆಗೆ ವಿದ್ಯುತ್ ಸಂಪರ್ಕವೂ ಇಲ್ಲ. ದೀಪದ ಬೆಳಕಿನಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ. ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ದಿನನಿತ್ಯದ ಚಟುವಟಿಕೆಗಳಿಗೆ ಸಮೀಪದ ಹೊಳೆಯ ನೀರು, ಮಳೆ ನೀರನ್ನು ಆಶ್ರಯಿಸಿದ್ದಾರೆ. ಇಲ್ಲಿನ ನಿವಾಸಿಗಳಿಗೆ ದಿನಗೂಲಿಯ ಆದಾಯವಾಗಿದೆ.

ಅತಿವೃಷ್ಟಿ ಸಂದರ್ಭದಲ್ಲಿ ಇಲ್ಲಿನ ಶಾಸಕ ಎಂ ಪಿ ಕುಮಾರಸ್ವಾಮಿ ಅವರು ಮುಂದೆ ನಿಂತು ನಿವೇಶನ ಮಂಜೂರು ಮಾಡಿಸಿದ್ದರು. ಆದರೆ, ಈವರೆಗೂ ಇವರಿಗೆ ಸೌಕರ್ಯ ಕಲ್ಪಿಸಿಲ್ಲ. ಮನೆ ಮಂಜೂರು ಮಾಡಿಲ್ಲ. ನಿವೇಶನಕ್ಕೆ ಹಕ್ಕುಪತ್ರ ನೀಡಿಲ್ಲ.

ಸಿಎಂ, ವಸತಿ ಸಚಿವ, ಶಾಸಕರನ್ನು ಭೇಟಿ ಮಾಡಿ, ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ:

ಬುಡಕಟ್ಟು ಆದಿವಾಸಿ ಸಂಘದ ಮೂಡಿಗೆರೆ ತಾಲೂಕು ಅಧ್ಯಕ್ಷ ಸಂಜೀವ ಮಾತನಾಡಿ, “ಆದಿವಾಸಿ ಬುಡಕಟ್ಟು ಸಮುದಾಯದ 49 ಕುಟುಂಬಗಳೂ ಸೇರಿದಂತೆ ಪರಿಶಿಷ್ಟ ಜಾತಿ ಹಾಗೂ ಇತರೆ ಸಮುದಾಯಗಳ ಒಟ್ಟು 73 ಕುಟುಂಬಗಳು ಕುಂಬಳಡಿಕೆಯಲ್ಲಿ ಶೆಡ್ ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದಾರೆ. ಮೂರು ವರ್ಷದ ಹಿಂದೆ ಅತಿವೃಷ್ಟಿ ಸಂದರ್ಭದಲ್ಲಿ ಕಾಫಿ ಎಸ್ಟೇಟ್‌ಗಳಿಂದ ಹೊರಹಾಕಲ್ಪಟ್ಟು ಇಲ್ಲಿಗೆ ಬಂದು ನೆಲೆ ನಿಂತಿದ್ದೇವೆ. ಆದರೆ ನಮಗೆ ಕನಿಷ್ಠ ಸೌಕರ್ಯಗಳು ಇಲ್ಲ” ಎಂದು ಆರೋಪಿಸಿದರು.

“ಕಳೆದ ಮೂರು ವರ್ಷಗಳಿಂದ ಅನೇಕ ಬಾರಿ ಶಾಸಕರನ್ನು ಭೇಟಿ ಮಾಡಿ ನಮಗೆ ಹಕ್ಕು ಪತ್ರ ನೀಡುವ ಜತೆಗೆ ಮೂಲ ಸೌಕರ್ಯ ಒದಗಿಸುವಂತೆ ಮನವಿ ಮಾಡಿದ್ದೇವೆ. ಬೆಂಗಳೂರಿಗೂ ಹೋಗಿ ಮುಖ್ಯಮಂತ್ರಿ ಮತ್ತು ವಸತಿ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ. ಆದರೂ ನಮಗೆ ಹಕ್ಕು ಪತ್ರ ನೀಡಿಲ್ಲ” ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ದೇಶದಲ್ಲಿ ಪ್ರಸ್ತುತ ರಾಷ್ಟ್ರಪತಿ ಚುನಾವಣೆ ನಡೆಯುತ್ತಿದೆ. ಆದಿವಾಸಿ ಸಮುದಾಯದ ಮಹಿಳೆಯನ್ನು ಮೋದಿ ಅವರು ರಾಷ್ಟ್ರಪತಿ ಸ್ಥಾನದ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಾರೆ. ಇದು ಒಂದೆಡೆಯಾದರೆ, ಮತ್ತೊಂದೆಡೆ ಆದಿವಾಸಿಗಳಾದ ನಾವು ಕನಿಷ್ಠ ಸೌಕರ್ಯಗಳಿಗಾಗಿ ಬೀದಿಯಲ್ಲಿ ನಿಂತು ಹೋರಾಟ ಮಾಡುತ್ತಿದ್ದೇವೆ. ಇದು ವಿಪರ್ಯಾಸ ಅಲ್ಲವೇ ” ಎಂದು ಸಂಜೀವ ಅಳಲು ತೋಡಿಕೊಂಡರು.

ಕಂದಾಯ ಇಲಾಖೆಯಿಂದ ಮಂಜೂರಾಗಿದೆ:

ಮೂಡಿಗೆರೆ ತಹಶೀಲ್ದಾರ್ ನಂದಕುಮಾರ್ , `ಮೂರು ವರ್ಷದ ಹಿಂದೆ ಆಶ್ರಯ ಯೋಜನೆಯಡಿ ನಿವೇಶನಗಳನ್ನು ಮಂಜೂರು ಮಾಡಲಾಗಿದೆ. 70ಕ್ಕೂ ಹೆಚ್ಚು ಕುಟುಂಬಗಳು ಅಲ್ಲಿ ಟೆಂಟ್ ಹಾಕಿಕೊಂಡಿದ್ದಾರೆ. ಅವರು ಹಕ್ಕು ಪತ್ರ ನೀಡಿ ಎಂದು ಕೇಳುತ್ತಿದ್ದಾರೆ.  ಆದರೆ ಆ ಕೆಲಸ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯಬೇಕಿದೆ  ಎಂದು ತಿಳಿಸಿದರು.

ನಿವೇಶನ ನೀಡಲು ತಾಂತ್ರಿಕ ಸಮಸ್ಯೆ

ಕಳಸ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವೀಶ್ ಮಾತನಾಡಿ, “ಆಶ್ರಯ ನಿವೇಶನದಲ್ಲಿ ಆನ್‌ಲೈನ್‌ನಲ್ಲಿ ನಿವೇಶನ  ಎಂಟ್ರಿ’ಮಾಡಲು ಅವಕಾಶ ಇಲ್ಲ. ಅದನ್ನು ಲಾಕ್ ಮಾಡಿದ್ದಾರೆ. ಈಗ ನಾಲ್ಕು ಎಕರೆಗೆ ಪಹಣಿ ಆಗಿದೆ. ಅತಿವೃಷ್ಟಿ ಸಂತ್ರಸ್ತರು ಮತ್ತು ನಿರಾಶ್ರಿತರಿಗೆ ಹತ್ತು ಎಕರೆಯಲ್ಲಿಯೇ ವಿಭಜನೆ ಮಾಡಲಾಗಿದೆ. ಇನ್ನೂ ಗಡಿ ಗುರುತು, ಲೇಔಟ್ ಪ್ಲಾನ್ ಆಗಬೇಕು. ಬಳಿಕ ಫಲಾನುಭವಿಗಳ ಆಯ್ಕೆ ಮಾಡಬೇಕು. ರಾಜೀವ್ ಗಾಂಧಿ ವಸತಿ ನಿಗಮದಲ್ಲಿ ಫಲಾನುಭವಿಗಳ ಹೆಸರು ದಾಖಲಿಸಬೇಕು. ಆದರೆ ಈಗ ಆನ್‌ಲೈನ್ ಬ್ಲಾಕ್ ಆಗಿದೆ.  ಆದ್ದರಿಂದ ಎಲ್ಲಾ ಕುಟುಂಬಗಳಿಗೂ ಒಂದೇ ಬಾರಿಗೆ ನಿವೇಶನದ ಹಕ್ಕುಪತ್ರ ನೀಡಲು ತಾಂತ್ರಿಕ ಸಮಸ್ಯೆ ಎದುರಾಗಿದೆ’ ಎಂದು ಸ್ಪಷ್ಟನೆ ನೀಡಿದರು.