ಮನೆ ರಾಜಕೀಯ ಸೇನೆಯನ್ನು ಜಾತಿ ರಾಜಕೀಯಕ್ಕೆ ಎಳೆದು ತರೋದು ದೇಶ ವಿಭಜಿಸುವ ಕುತಂತ್ರ – ರಾಹುಲ್‌ಗೆ ರಾಜನಾಥ್‌ ಸಿಂಗ್‌...

ಸೇನೆಯನ್ನು ಜಾತಿ ರಾಜಕೀಯಕ್ಕೆ ಎಳೆದು ತರೋದು ದೇಶ ವಿಭಜಿಸುವ ಕುತಂತ್ರ – ರಾಹುಲ್‌ಗೆ ರಾಜನಾಥ್‌ ಸಿಂಗ್‌ ತಿರುಗೇಟು

0

ನವದೆಹಲಿ : ನಮ್ಮ ಭಾರತೀಯ ಸಶಸ್ತ್ರ ಪಡೆಗಳಲ್ಲಿ ಎಲ್ಲಾ ಜಾತಿ, ಧರ್ಮ, ಪಂಗಡದವರು ಇದ್ದಾರೆ. ಆದ್ರೆ ಅವರಲ್ಲಿ ಎಂದಿಗೂ ತಾರತಮ್ಯವಿಲ್ಲ. ಸೇನೆಯನ್ನ ಜಾತಿ ರಾಜಕೀಯಕ್ಕೆ ಎಳೆದು ತರೋದು ದೇಶ ಒಡೆಯುವ ಕುತಂತ್ರ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ರಾಹುಲ್‌ ಗಾಂಧಿ ವಿರುದ್ಧ ಹರಿಹಾಯ್ದರು.

ಖಾಸಗಿ ಸುದ್ದಿವಾಹಿನಿಯೊಂದರ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ʻ10% ಇರುವ ಜನರು ಸೇನೆಯನ್ನ ನಿಯಂತ್ರಿಸುತ್ತಿದ್ದಾರೆʼ ಎಂಬ ರಾಹುಲ್‌ ಗಾಂಧಿ ಹೇಳಿಕೆಯನ್ನ ತೀವ್ರವಾಗಿ ಖಂಡಿಸಿದರು. ಇದು ರಾಹುಲ್‌ ಗಾಂಧಿ ಅವರ ಬೇಜವಾಬ್ದಾರಿ ತನದ ಹೇಳಿಕೆ. ಜಾತಿ ರಾಜಕೀಯಕ್ಕೆ ಸೇನೆಯನ್ನು ಎಳೆದು ತರುತ್ತಿರುವುದು ವಿಭಜಿಸುವ ರಾಜಕೀಯ ಕುತಂತ್ರ ಎಂದು ವಾಗ್ದಾಳಿ ನಡೆಸಿದರು.

ರಾಹುಲ್‌ ಗಾಂಧಿ ಅಭಿವೃದ್ಧಿ ಮೂಲಕ ಮತ್ತು ತಮ್ಮ ಕೆಲಸಗಳ ಮೂಲಕ ಸಾರ್ವಜನಿಕರ ನಂಬಿಕೆಯನ್ನು ಗಳಿಸಲು ಸಾಧ್ಯವಿಲ್ಲ. ಅದಕ್ಕಾಗಿ ಜನರ ದಾರಿ ತಪ್ಪಿಸುವ, ಆಧಾರ ರಹಿತ ಹೇಳಿಕೆಗಳನ್ನ ನೀಡುವುದು ಅಭ್ಯಾಸ ಆಗಿಬಿಟ್ಟಿದೆ. ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ಆದ್ರೆ ಆರೋಗ್ಯಕರ ರಾಜಕೀಯ ಎಂದಿಗೂ ದಾರಿ ತಪ್ಪಲ್ಲ ಎಂದು ಕುಟುಕಿದರು.

ಸಶಸ್ತ್ರ ಪಡೆಗಳಲ್ಲಿ ಎಲ್ಲಾ, ಜಾತಿ, ಧರ್ಮ, ಪಂಗಡಗಳ ಜನರು ಇದ್ದಾರೆ. ಪ್ರತಿಯೊಬ್ಬರೂ ತಮ್ಮದೇ ಆದ ಧರ್ಮ ಮತ್ತು ಧಾರ್ಮಿಕ ಆಚರಣೆಗಳನ್ನ ಅನುಸರಿಸುತ್ತಾರೆ. ಆ ಆಚರಣೆಗಳನ್ನು ನಿರ್ವಹಿಸುವ ಪುರೋಹಿತರೂ ಅಲ್ಲಿ ಉಪಸ್ಥಿತರಿರುತ್ತಾರೆ.

ಆದರೆ ಸೇನೆಯಲ್ಲಿ ಯಾವುದೇ ರೀತಿಯ ತಾರತಮ್ಯವಿಲ್ಲ. ಜಾತಿವಾದವಿಲ್ಲ, ಕೋಮು ದ್ವೇಷ, ಪಕ್ಷಪಾತವಾಗಲಿ ಇಲ್ಲ. ದೇಶ ಅಂತ ಬಂದಾಗ ಅವರೆಲ್ಲರೂ ಭಾರತೀಯರಾಗಿದ್ದಾರೆ. ಮಿಲಿಟರಿ ಕರ್ತವ್ಯ ನಿರ್ವಹಿಸುವುದೇ ಅವರ ಗುರಿಯಾಗಿದೆ. ಹಾಗಾಗಿ ನಮ್ಮ ಸಶಸ್ತ್ರ ಪಡೆಗಳನ್ನ ರಾಜಕೀಯಕ್ಕೆ ಎಳೆದು ತರೋದು ಸರಿಯಲ್ಲ ಎಂದು ರಾಹುಲ್‌ ಗಾಂಧಿ ಹೇಳಿಕೆಗೆ ತಿರುಗೇಟು ನೀಡಿದರು.

ಔರಂಗಾಬಾದ್‌ನಲ್ಲಿ ನಡೆದ ಚುನಾವಣಾ ಪ್ರಚಾರ ಭಾಷಣದಲ್ಲಿ ಮಾತನಾಡಿದ್ದ ರಾಹುಲ್‌ ಗಾಂಧಿ, ದೇಶದ ಜನಸಂಖ್ಯೆಯ ಶೇ.10 ರಷ್ಟು ಇರುವ ಜನರು ಮಾತ್ರ ಕಾರ್ಪೊರೇಟ್ ವಲಯಗಳು, ಅಧಿಕಾರಶಾಹಿ ಮತ್ತು ನ್ಯಾಯಾಂಗದಲ್ಲಿ ಅವಕಾಶಗಳು ಸಿಗುತ್ತವೆ. ಸೇನೆಯೂ ಸಹ ಅವರ ನಿಯಂತ್ರಣದಲ್ಲಿದೆ ಎಂದು ಹೇಳಿದ್ದರು.