ನವದೆಹಲಿ : ಭಾರತ ಮತ್ತು ಭೂತಾನ್ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಪ್ರಧಾನಿ ನರೇಂದ್ರ ಮೋದಿ ನವೆಂಬರ್ 11 ಮತ್ತು 12ರಂದು ಭೂತಾನ್ಗೆ ಭೇಟಿ ನೀಡಲಿದ್ದಾರೆ.
ಈ ಭೇಟಿಯ ಸಮಯದಲ್ಲಿ ಮೋದಿ ಅವರು ಭೂತಾನ್ ರಾಜ ಜಿಗ್ಮೆ ಖೇಸರ್ ನಮ್ಗ್ಯೆಲ್ ವಾಂಗ್ಚುಕ್ ಮತ್ತು ಪ್ರಧಾನಿ ತ್ಸೆರಿಂಗ್ ಟೋಬ್ಗೆ ಅವರನ್ನು ಭೇಟಿ ಮಾಡಲಿದ್ದಾರೆ. ಈ ವೇಳೆ ಪ್ರಧಾನಿ ಮೋದಿ ಮತ್ತು ಭೂತಾನ್ ರಾಜ ಜಿಗ್ಮೆ ಒಟ್ಟಾಗಿ ಪುನತ್ಸಂಗ್ಚು-II ಜಲವಿದ್ಯುತ್ ಯೋಜನೆಯನ್ನು ಉದ್ಘಾಟಿಸಲಿದ್ದಾರೆ.
ಭೂತಾನಿನ ಮಾಜಿ ರಾಜ ಜಿಗ್ಮೆ ಸಿಂಗ್ಯೆ ವಾಂಗ್ಚುಕ್ ಅವರ 70ನೇ ಜನ್ಮ ದಿನಾಚರಣೆಯ ಆಚರಣೆಯಲ್ಲಿಯೂ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ. ಮೋದಿ ಅವರು ಥಿಂಪುವಿನ ತಾಶಿಚೋಡ್ಜಾಂಗ್ನಲ್ಲಿರುವ ಪವಿತ್ರ ಅವಶೇಷಗಳಿಗೆ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಭೂತಾನ್ ಸರ್ಕಾರ ಆಯೋಜಿಸಿರುವ ಜಾಗತಿಕ ಶಾಂತಿ ಪ್ರಾರ್ಥನಾ ಉತ್ಸವದಲ್ಲಿ ಭಾಗವಹಿಸಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಮೋದಿ ಅವರ ಭೇಟಿಯು ದ್ವಿಪಕ್ಷೀಯ ಪಾಲುದಾರಿಕೆಯನ್ನು ಮತ್ತಷ್ಟು ವರ್ಧಿಸುವ ಮತ್ತು ಬಲಪಡಿಸುವ ಮಾರ್ಗಗಳ ಕುರಿತು ಚರ್ಚಿಸಲು, ಪರಸ್ಪರ ಆಸಕ್ತಿಯ ವಿಷಯಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲು ಎರಡೂ ಕಡೆಯವರಿಗೆ ಅವಕಾಶವನ್ನು ಒದಗಿಸುತ್ತದೆ ಎಂದು ಸಚಿವಾಲಯ ತಿಳಿಸಿದೆ.
ಭಾರತವು ಇತ್ತೀಚೆಗೆ 4,033 ಕೋಟಿ ರೂ. ವೆಚ್ಚದಲ್ಲಿ ಭೂತಾನ್ನೊಂದಿಗೆ ಮೊದಲ 2 ಗಡಿಯಾಚೆಗಿನ ರೈಲ್ವೆ ಸಂಪರ್ಕಗಳನ್ನು ನಿರ್ಮಿಸುವುದಾಗಿ ಘೋಷಿಸಿತು. ಈ ಯೋಜನೆಯನ್ನು ಆರ್ಥಿಕ ಏಕೀಕರಣ ಮತ್ತು ವ್ಯಾಪಾರವನ್ನು ಹೆಚ್ಚಿಸಲು ಪ್ರಾದೇಶಿಕ ಸಂಪರ್ಕವನ್ನು ಬಲಪಡಿಸುವ ಭಾರತದ ಪ್ರಯತ್ನಗಳ ಭಾಗವಾಗಿ ನೋಡಲಾಗಿದೆ.














