ಮನೆ ರಾಷ್ಟ್ರೀಯ ಈ ವರ್ಷ ಸಕ್ಕರೆ ಉತ್ಪಾದನೆ ಶೇ. 16ರಷ್ಟು ಹೆಚ್ಚುವ ನಿರೀಕ್ಷೆ..!

ಈ ವರ್ಷ ಸಕ್ಕರೆ ಉತ್ಪಾದನೆ ಶೇ. 16ರಷ್ಟು ಹೆಚ್ಚುವ ನಿರೀಕ್ಷೆ..!

0

ಈ ಹಣಕಾಸು ವರ್ಷದಲ್ಲಿ ಭಾರತದಲ್ಲಿ ಸಕ್ಕರೆ ಉತ್ಪಾದನೆ ಶೇ. 16ರಷ್ಟು ಹೆಚ್ಚಬಹುದು ಎಂದು ನಿರೀಕ್ಷಿಸಲಾಗುತ್ತಿದೆ. ಈ ಬಾರಿ ಉತ್ತಮ ಹವಾಮಾನ, ಮಳೆ ಹಾಗೂ ಅಧಿಕ ಇಳುವರಿಯಿಂದಾಗಿ ಸಕ್ಕರೆ ಉತ್ಪಾದನೆ 343.5 ಲಕ್ಷ ಟನ್​ಗಳಷ್ಟಾಗಬಹುದು ಎಂದು ಹೆಳಲಾಗುತ್ತಿದೆ.

2024-25ರಲ್ಲಿ 296.1 ಲಕ್ಷ ಟನ್​ಗಳಷ್ಟು ಸಕ್ಕರೆ ಉತ್ಪಾದನೆ ಆಗಿತ್ತು. ಈ ವರ್ಷ ಶೇ. 16ರಷ್ಟು ಹೆಚ್ಚು ಉತ್ಪಾದನೆ ಆಗಬಹುದು ಎಂದು ಸಕ್ಕರೆ ಉತ್ಪಾದಕರ ಸಂಘಟನೆಯಾದ ಐಎಸ್​ಎಂಎ ಅಂದಾಜು ಮಾಡಿದೆ.

ಭಾರತೀಯ ಸಕ್ಕರೆ ಮತ್ತು ಜೈವಿಕ ಇಂಧನ ತಯಾರಕರ ಸಂಘಟನೆ (ಐಎಸ್​ಎಂಎ) ಈ ವಾರ ತನ್ನ ಮೊದಲ ಮುಂಗಡ ಅಂದಾಜು ವರದಿಯನ್ನು ಬಿಡುಗಡೆ ಮಾಡಿದೆ. ಅಕ್ಟೋಬರ್ ತಿಂಗಳಲ್ಲಿ ಸೆರೆಹಿಡಿಯಲಾದ ಮುಂಗಾರು ನಂತರದ ಕಬ್ಬು ಬೆಳೆಗಳ ಸೆಟಿಲೈಟ್ ಇಮೇಜ್​ಗಳನ್ನು ನವೆಂಬರ್ 4ರಂದು ನಡೆದ ಇಸ್ಮಾ ಎಕ್ಸಿಕ್ಯೂಟಿವ್ ಕಮಿಟಿ ಸಭೆಯಲ್ಲಿ ಪರಿಶೀಲಿಸಲಾಗಿದೆ.

ಹಾಗೆಯೇ, ಫೀಲ್ಡ್ ರಿಪೋರ್ಟ್​ಗಳನ್ನೂ ಸಭೆಯಲ್ಲಿ ಚರ್ಚಿಸಲಾಗಿದೆ. ಉತ್ತಮವಾಗಿ ಹರಡಿರುವ ಮುಂಗಾರು ಮಳೆ, ಜಲಾಶಯಗಳಲ್ಲಿ ಉತ್ತಮ ನೀರು ಸಂಗ್ರಹ, ಕಬ್ಬು ಅಭಿವೃದ್ಧಿ ಯೋಜನೆಗಳು ಇತ್ಯಾದಿ ಅಂಶಗಳು ಕಬ್ಬು ಬೆಳೆ ಉತ್ತಮವಾಗಿರುವುದನ್ನು ಸೂಚಿಸುತ್ತಿವೆ ಎಂಬುದು ಇಸ್ಮಾದ ಅನಿಸಿಕೆಯಾಗಿದೆ.

ಸಕ್ಕರೆ ಉತ್ಪಾದನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ 15 ಲಕ್ಷ ಟನ್​ಗಳಷ್ಟು ಸಕ್ಕರೆ ರಫ್ತಿಗೆ ಅನುಮತಿ ಕೊಟ್ಟಿದೆ. ಹಾಗೆಯೇ, ಕಾಕಂಬಿಗಳ ಮೇಲಿದ್ದ ಶೇ. 50ರಷ್ಟು ಸುಂಕವನ್ನೂ ಸರ್ಕಾರ ತೆಗೆದುಹಾಕಿದೆ. ಇದರಿಂದ ಸಕ್ಕರೆ ಉದ್ಯಮಕ್ಕೆ ಪುಷ್ಟಿ ಸಿಗುವ ನಿರೀಕ್ಷೆ ಇದೆ.

ಕಳೆದ ವರ್ಷ (2024-25) 57.11 ಲಕ್ಷ ಹೆಕ್ಟೇರ್​ಗಳಲ್ಲಿ ಕಬ್ಬು ಬೆಳೆಯಲಾಗಿತ್ತು. ಈ ವರ್ಷ 57.35 ಲಕ್ಷ ಹೆಕ್ಟೇರ್​ಗಳಲ್ಲಿ ಬೆಳೆಯಲಾಗುತ್ತಿದೆ. ಕಬ್ಬು ಈಗ ಹೆಚ್ಚು ಲಾಭದಾಯಕ ಎನಿಸಿರುವುದನ್ನು ಇದು ತೋರಿಸುತ್ತದೆ.

ವಿಶ್ವದಲ್ಲಿ ಸಕ್ಕರೆ ಉತ್ಪಾದನೆಯಲ್ಲಿ ಬ್ರೆಜಿಲ್ ಬಿಟ್ಟರೆ ಭಾರತದಲ್ಲೇ ಹೆಚ್ಚು. ಭಾರತದಲ್ಲಿ ಮಹಾರಾಷ್ಟ್ರದಲ್ಲಿ ಅತಿಹೆಚ್ಚು ಕಬ್ಬು ಬೆಳೆಯಲಾಗುತ್ತದೆ. ಕಳೆದ ವರ್ಷಕ್ಕಿಂತ ಸಕ್ಕರೆ ಉತ್ಪಾದನೆಯಲ್ಲಿ ಅತೀ ಹೆಚ್ಚಳ ಆಗುವ ನಿರೀಕ್ಷೆ ಇರುವುದು ಮಹಾರಾಷ್ಟ್ರದಿಂದಲೇ. ಕಳೆದ ವರ್ಷ ಇಲ್ಲಿ 93.51 ಲಕ್ಷ ಟನ್ ಸಕ್ಕರೆ ಉತ್ಪಾದನೆಯಾಗಿತ್ತು. ಈ ವರ್ಷ 130 ಲಕ್ಷ ಟನ್​ಗೆ ಏರುವ ನಿರೀಕ್ಷೆ ಇದೆ. ಈ ರಾಜ್ಯದಲ್ಲಿ ಸುಮಾರು 14 ಹೆಕ್ಟೇರ್​ಗಿಂತ ಹೆಚ್ಚು ಪ್ರದೇಶದಲ್ಲಿ ಕಬ್ಬು ಬೆಳೆಯಲಾಗುತ್ತಿದೆ.

ಉತ್ತರಪ್ರದೇಶದಲ್ಲಿ 22.57 ಲಕ್ಷ ಹೆಕ್ಟೇರ್ ಜಾಗದಲ್ಲಿ ಈ ಬಾರಿ 103.2 ಲಕ್ಷ ಟನ್ ಸಕ್ಕರೆ ಉತ್ಪಾದನೆಯಾಗಬಹುದು. ಕರ್ನಾಟಕದಲ್ಲಿ 6.8 ಲಕ್ಷ ಹೆಕ್ಟೇರ್ ಜಾಗದಲ್ಲಿ ಕಬ್ಬು ಬೆಳೆಯಲಾಗುತ್ತಿದೆ. ಕಳೆದ ವರ್ಷ 54.89 ಲಕ್ಷ ಟನ್ ಸಕ್ಕರೆ ಉತ್ಪಾದಿಸಿದ್ದ ಕರ್ನಾಟಕ ಈ ಬಾರಿ 63.5 ಲಕ್ಷ ಟನ್ ಉತ್ಪಾದಿಸಬಹುದು.