ನವದೆಹಲಿ : ದೆಹಲಿ ಸ್ಫೋಟಕ್ಕೆ ಕಾರಣವಾದ ಕಾರು 2019 ರ ಪುಲ್ವಾಮಾ ದಾಳಿ ವೇಳೆ ಬಳಕೆಯಾದ ಕಾರಿನಂತೆ ಮಾರಾಟವಾಗಿರುವ ವಿಚಾರ ಈಗ ಬೆಳಕಿಗೆ ಬಂದಿದೆ.
ಸ್ಫೋಟಕ್ಕೆ ಕಾರಣವಾದ ಐ20 ಕಾರಿನ ಮೂಲ ಮಾಲೀಕರನ್ನು ಪತ್ತೆ ಹಚ್ಚುವ ಕೆಲಸವನ್ನು ಪೊಲೀಸರು ಈಗ ಆರಂಭಿಸಿದ್ದಾರೆ. HR 26CE7674 ನಂಬರಿನ ಕಾರು ಮೊದಲು ಮೊಹಮ್ಮದ್ ಸಲ್ಮಾನ್ ಹೆಸರಿನಲ್ಲಿ ಹರಿಯಾಣದಲ್ಲಿ ನೋಂದಣಿಯಾಗಿತ್ತು. ನಂತರ ಸಲ್ಮಾನ್ ಈ ಕಾರನ್ನು ಮೊಹಮ್ಮದ್ ನದೀಂಗೆ ಮಾರಾಟ ಮಾಡಿದ್ದ.
ನದೀಂ ಈ ಕಾರನ್ನು ಒಂದೂವರೆ ವರ್ಷದ ಹಿಂದೆ ಫರೀದಾಬಾದ್‌ನಲ್ಲಿರುವ ಸೆಕೆಂಡ್ ಹ್ಯಾಂಡ್ ಕಾರು ಡೀಲರ್ ದೇವೇಂದ್ರಗೆ ಮಾರಾಟ ಮಾಡಿದ್ದ. ದೇವೇಂದ್ರನ ಬಳಿಯಿಂದ ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿರುವ ತಾರೀಕ್ ಖಾನ್ ಖರೀದಿಸಿದ್ದ ವಿಚಾರ ತಿಳಿದುಬಂದಿದೆ.
ಪುಲ್ವಾಮಾ ದಾಳಿಗೆ ಬಳಸಲಾಗಿದ್ದ ಮಾರುತಿ ಸುಜುಕಿ ಎಕೋ ವ್ಯಾನ್ ಅನ್ನು ಮೊದಲು 2011 ರಲ್ಲಿ ಖರೀದಿಸಲಾಗಿತ್ತು. ನಂತರ ಈ ಕಾರು 7 ಬಾರಿ ಮಾರಾಟವಾಗಿತ್ತು. ಕೊನೆಯ ಬಾರಿ ಇದು ಅನಂತನಾಗ್‌ನ ಬಿಜ್‌ಬೆಹರಾ ನಿವಾಸಿ ಸಜ್ಜದ್ ಭಟ್ ಕೈ ಸೇರಿತ್ತು. ಪುಲ್ವಾಮಾ ದಾಳಿಗೂ 10 ದಿನದ ಮೊದಲು ಸಜ್ಜದ್ ಭಟ್ ಖರೀದಿ ಮಾಡಿದ್ದ.
ನಕಲಿ ದಾಖಲೆಗಳನ್ನು ಬಳಸಿ ಕಾರು ಹಲವು ಬಾರಿ ಮಾರಾಟವಾಗಿರುವ ವಿಚಾರ ಪ್ರಾಥಮಿಕ ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಇಲ್ಲಿಯವರೆಗೆ ಈ ಕಾರು ಕೊನೆಯ ಬಾರಿ ಯಾರ ಕೈ ಸೇರಿತ್ತು ಎನ್ನುವುದು ದೃಢಪಟ್ಟಿಲ್ಲ ಎಂದು ವರದಿಯಾಗಿದೆ.















