ಮೈಸೂರು : ಮೈಸೂರು ಜಿಲ್ಲೆಯಲ್ಲಿ ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಾಗಿದ್ದು, ಸಿಎಂ ಸಿದ್ದರಾಮಯ್ಯ ಅವರು ವೈಜ್ಞಾನಿಕ ಪರಿಹಾರ ಕಂಡುಕೊಳ್ಳಲು ಅರಣ್ಯ ಇಲಾಖೆಗೆ ಈಗಾಗಲೇ ಸೂಚನೆ ನೀಡಿದ್ದಾರೆ. ಪ್ರಾಣಿಗಳು ಅರಣ್ಯದಿಂದ ಹೊರಬರಲು ಕಾರಣಗಳನ್ನ ಕೇಳಿ, ಕೆರೆಗಳನ್ನು ತುಂಬಿಸಿ, ಗಿಡಗಳನ್ನು ತೆರವುಗೊಳಿಸಿ ಮೇವು ಬೆಳೆಸಲು ಆದೇಶಿಸಿದ್ದಾರೆ.
ಜೊತೆಗೆ ಕಾಡುಪ್ರಾಣಿಗಳ ಸಂಘರ್ಷ ತಡೆಗೆ 1926 ಟೋಲ್ ಫ್ರೀ ಸಹಾಯವಾಣಿಯನ್ನೂ ಸಹ ಬಿಡುಗಡೆ ಮಾಡಲಾಗಿದೆ. ಈ ನಡುವೆ ಈವರೆಗೆ ಯಾವುದೇ ಕ್ರಮ ಕೈಗೊಳ್ಳದ ಅರಣ್ಯ ಇಲಾಖೆ ನಡೆ ಖಂಡಿಸಿ ರೈತರು ಪ್ರತಿಭಟನೆ ನಡೆಸಿದ್ದಾರೆ. ಮಾನವ-ವನ್ಯಜೀವಿ ಸಂಘರ್ಷ ಮುಂದುವರಿದ ಹಿನ್ನೆಲೆ ರೊಚ್ಚಿಗೆದ್ದ ರೈತರು ಮೈಸೂರಿನ ಅಶೋಕಪುರಂನಲ್ಲಿರುವ ಅರಣ್ಯ ಭವನ ಮುತ್ತಿಗೆಗೆ ಯತ್ನಿಸಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘದಿಂದ ಪ್ರತಿಭಟನೆ ನಡೆಸಲಾಗಿದ್ದು, ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಈ ವೇಳೆ ರೈತರನ್ನು ಅರಣ್ಯ ಭವನದ ಗೇಟ್ ಬಳಿಯೇ ಪೊಲೀಸರು ತಡೆದಿದ್ದಾರೆ. ಇದರಿಂದ ಪೊಲೀಸರು ಮತ್ತು ರೈತರ ನಡುವೆ ಮಾತಿನ ಚಕಮಕಿ ಉಂಟಾಗಿದೆ. ʻಕಾಡು ಪ್ರಾಣಿಗಳಿಂದ ರೈತರನ್ನು ಉಳಿಸಿʼ ಎಂದು ಘೋಷಣೆ ಕೂಗುತ್ತಾ ಪ್ರತಿಭಟಿಸಿದ ರೈತರು ರಾಜ್ಯ ಸರ್ಕಾರ ಹಾಗೂ ಅರಣ್ಯ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಹೆಚ್.ಡಿ ಕೋಟೆ ಭಾಗದಲ್ಲಿ ಆಗುತ್ತಿರುವ ಹುಲಿ ದಾಳಿಗಳಿಂದ ಕಾಡಂಚಿನ ಜನರಿಗೆ ರಕ್ಷಣೆ ನೀಡಬೇಕು ಎಂದು ರಾಜ್ಯ ರೈತ ಕಾರ್ಯದರ್ಶಿ ಚಾಮರಾಜು ಆಗ್ರಹಿಸಿದರು.
ರೈತಪರ್ವ ರಾಜ್ಯಾಧ್ಯಕ್ಷ ಅರುಣ್ ಕುಮಾರ್ ಮಾತನಾಡಿ, ಅರಣ್ಯ ಭಾಗದಲ್ಲಿರುವ ಅಕ್ರಮ ರೆಸಾರ್ಟ್, ಹೋಮ್ ಸ್ಟೇಗಳನ್ನು ಬಂದ್ ಮಾಡಲು ಕ್ರಮ ಕೈಗೊಳ್ಳಬೇಕು. ಕಾಡು ಪ್ರಾಣಿಗಳ ರಕ್ಷಣೆ ಜೊತೆಗೆ ಆನೆಯಿಂದ ಬೆಳೆ ನಾಶ, ಹುಲಿ ದಾಳಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಅದಕ್ಕಾಗಿ ಈ ಬಾರಿ ಮನವಿ ಅಲ್ಲ, ಎಚ್ಚರಿಕೆ ಕೊಟ್ಟಿದ್ದೇವೆ, 1 ತಿಂಗಳ ಡೆಡ್ಲೈನ್ ನೀಡಿದ್ದೇವೆ. ಅಷ್ಟರಲ್ಲಿ ಅಕ್ರಮ ಹೋಮ್ ಸ್ಟೇ, ರೆಸಾರ್ಟ್ಗಳನ್ನ ತೆರವುಗೊಳಿಸದೇ ಇದ್ರೆ, ನಾವೇ ಧ್ವಂಸ ಮಾಡುತ್ತೇವೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ಕಾಡಂಚಿನ ಜನ ಹಸುಗಳಿಗೆ ಸ್ವಲ್ಪ ಹುಲ್ಲಿ, ಸಣ್ಣ ಸೌದೆ ತಂದರೂ 5-10 ವರ್ಷ ಅಂತ ಕೇಸ್ ಹಾಕಿ ಒಳಹೆ ಕಳಿಸ್ತಾರೆ. ಆದ್ರೆ ರಾಜಕೀಯ ವ್ಯಕ್ತಿಗಳ ರೆಸಾರ್ಟ್ ಇದ್ರೂ ಯಾವುದೇ ಕ್ರಮ ತಗೋತಿಲ್ಲ. ಹಾಗಾಗಿ ಎಚ್ಚರಿಕೆ ನೀಡಿದ್ದೇವೆ. ರೈತರಿಂದ ಮನವಿ ಸ್ವೀಕರಿಸಿದ ಬಳಿಕ ಮಾತನಾಡಿದ ಅರಣ್ಯಾಧಿಕಾರಿಗಳು, ಸಫಾರಿ ಗೈಡ್ಗಳ ಬಳಸಿಕೊಂಡು ಊರೂರಿಗೆ ಹೋಗಿ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದೇವೆ. 1926 ಟೋಲ್ ಸಹಾಯವಾಣಿ ಸಹ ಆರಂಭಿಸಿದ್ದೇವೆ.
ಬೋನ್ಗಳನ್ನು ಇರಿಸಿ ಹುಲಿ ಸೆರೆ ಕಾರ್ಯಾಚರಣೆ ನಡೆಸಲಾಗುತ್ತಿದೆ. ಟ್ರ್ಯಾಪ್ ಕ್ಯಾಮೆರಾಗಳನ್ನೂ ಅಳವಡಿಸಿದ್ದೇವೆ, ಶೀಘ್ರದಲ್ಲೇ ಸಮಸ್ಯೆ ಬಗೆಹರಿಸಲಾಗುವುದು. ಅಲ್ಲದೇ ರೆಸಾರ್ಟ್ ಹೋಮ್ ಸ್ಟೇ ಗಳು ಅರಣ್ಯ ವ್ಯಾಪ್ತಿಯಲ್ಲಿ ಇಲ್ಲ. ಕಂದಾಯ ಇಲಾಖೆ ವ್ಯಾಪ್ತಿಯ ಜಾಗದಲ್ಲಿದೆ. ಆದ್ರೂ ಇದನ್ನು ರಾಜ್ಯ ಸರ್ಕಾರದ ಗಮನಕ್ಕೆ ತರುತ್ತೇವೆ ಎಂದು ಭರವಸೆ ನೀಡಿದ್ದಾರೆ.














