ಪಾಟ್ನಾ : ದೇಶದ ಚಿತ್ತ ಈಗ ಬಿಹಾರದತ್ತ. ಬುದ್ಧನ ನೆಲದಲ್ಲೀಗ ರಣರೋಚಕ ರಿಸಲ್ಟ್ ಏನಾಗುತ್ತದೆ ಎಂಬ ಕಾತರ ಎಲ್ಲರಿಗೂ ಮೂಡಿದೆ. ಗೆರಿಲ್ಲಾ ಯುದ್ಧದಿಂದ ಬ್ರಿಟಿಷರನ್ನೇ ನಡುಗಿಸಿದ್ದ ರಾಜ್ಯದಲ್ಲೀಗ ರಾಜಕೀಯ ಗೆರಿಲ್ಲಾ ವಾರ್ ಕೂಡ ಅಷ್ಟೇ ಪ್ರಖ್ಯಾತಿ. ಈ ಒಂದೇ ಒಂದು ರಿಸಲ್ಟ್ ಐವರಿಗೆ ಆಗ್ನಿಪರೀಕ್ಷೆಯಾಗಿದೆ.
ಪೂರ್ವ ಭಾರತದ ಪ್ರಮುಖ ರಾಜ್ಯ ಬಿಹಾರ. ಮಹಾಭಾರತದಲ್ಲಿ ಮಗಧ ಹೆಸರು ಗಳಿಸಿದ್ದ ರಾಜ್ಯ. ಮಯೂರ, ಪಾಳ, ಗುಪ್ತ ವಂಶದ ರಾಜರಿಂದ ವಿಶ್ವವಿಖ್ಯಾತ ಪಡೆದ ರಾಜ್ಯ. ಬುಡಕಟ್ಟು ನಾಯಕ ಬಿರ್ಸಾ ಮುಂಡಾ ನಡೆಸಿದ್ದ ಗೆರಿಲ್ಲಾ ಯುದ್ಧ ಬ್ರಿಷರನ್ನ ಗಢಗಢ ನಡುಗಿಸಿತ್ತು. ಸ್ವಾತಂತ್ರ್ಯ ನಂತರ ಬಿಹಾರದಲ್ಲಿ ಹಲವು ರಾಜಕೀಯ ಸ್ಥಿತ್ಯಂತರಗಳನ್ನ ಕಂಡಿರುವ ಬಿಹಾರ ಇಲ್ಲಿ ತನಕ ಒಟ್ಟು 23 ಮುಖ್ಯಮಂತ್ರಿಗಳನ್ನ ಕಂಡಿದೆ.
ಬಿಹಾರದಲ್ಲಿ ಆರಂಭದಲ್ಲಿ ಕಾಂಗ್ರೆಸ್ ಪ್ರಾಬಲ್ಯವಿದ್ದರೂ ಜೆಪಿ ಚಳವಳಿ ಸೇರಿ ಅನೇಕ ಆಂದೋಲನಗಳ ಬಳಿಕ ಸಮಾಜವಾದಿ ಸಿದ್ಧಾಂತ ನೆಲೆಗೊಂಡು ಲಾಲೂ ಪ್ರಸಾದ್ ಯಾದವ್, ಜಾರ್ಜ್ ಫರ್ನಾಂಡೀಸ್, ನಿತೀಶ್ ಕುಮಾರ್ ರಾಜಕೀಯ ತಾರೆಗಳು ಬಿಹಾರದಲ್ಲಿ ವಿರಮಿಸಿದ್ರು. ಆದರೀಗ ಅದೇ ನಿತೀಶ್ ಕುಮಾರ್ ಯುವ ನಾಯಕತ್ವದ ಜೊತೆ ಗುದ್ದಾಡುತ್ತಿದ್ದು, ಗದ್ದುಗೆ ಯಾರಿಗೆ ದಕ್ಕಲಿದೆ ಎಂಬ ಕುತೂಹಲವಿದೆ.
ಯಾದವೀ ಕಲಹ ಆರ್ಜೆಡಿಗೆ ಬಿಸಿ ತುಪ್ಪ. ಲಾಲೂ ಪ್ರಸಾದ್ ಯಾದವ್ ಈ ಚುನಾವಣೆಯಲ್ಲಿ ಅಬ್ಬರಿಸಲು ಆಗದೇ ಮರೆಯಾಗಿದ್ದಾರೆ. ಪುತ್ರ ತೇಜಸ್ವಿ ಯಾದವ್ ಆರ್ಜೆಡಿ ಸಾರಥಿಯಾಗಿ ಮಾಡು ಇಲ್ಲವೇ ಮಡಿ ಹೋರಾಟಕ್ಕೆ ಸೈ ಅಂದಿದ್ದಾರೆ. ತೇಜಸ್ವಿಗೆ ರಾಹುಲ್ ಗಾಂಧಿ ಸಾಥ್ ನೀಡಿದ್ದು, ಎಸ್ಐಆರ್ ವಿರೋಧ, ವೋಟ್ ಚೋರಿ ಅಭಿಯಾನದ ಮೂಲಕ ತಮ್ಮ ನಾಯಕತ್ವವನ್ನ ಆಗಿಪರೀಕ್ಷೆಗೊಡ್ಡಿದ್ದಾರೆ.
ಇನ್ನೊಂದೆಡೆ ಲಾಲೂ ಕುಟುಂಬದಿಂದ ಹೊರಬಿದ್ದಿರುವ ಇನ್ನೊಬ್ಬ ಪುತ್ರ ತೇಜ್ ಪ್ರತಾಪ್ ಜನಶಕ್ತಿ ಜನಾತದಳ ಸ್ಥಾಪಿಸಿ ತಮ್ಮ ಶಕ್ತಿಯನ್ನೂ ಪಣಕ್ಕಿಟ್ಟಿದ್ದು, ಕುತೂಹಲ ಹುಟ್ಟುಹಾಕಿದೆ. ಅಲ್ಲದೆ ರಾಜಕೀಯ ತಂತ್ರಗಾರಿಕೆ ನಿಪುಣ ಪ್ರಶಾಂತ್ ಕಿಶೋರ್ಗೆ ಇದು ರಿಯಲ್ ಟೈಂ ಟೆಸ್ಟ್ ಆಗಿದ್ದು, ಎಷ್ಟು ಸ್ಥಾನ ಗೆಲ್ತಾರೆ ಅನ್ನೋದಕ್ಕಿಂತ ಯಾರಿಗೆ ದೊಡ್ಡ ಹೊಡೆತ ಕೊಡ್ತಾರೆ ಅನ್ನೋ ಕುತೂಹಲವೂ ಮನೆ ಮಾಡಿದೆ. ಒಟ್ಟಿನಲ್ಲಿ ಮತಗಟ್ಟೆ ಸಮೀಕ್ಷೆಗಳಲ್ಲಿ ಎನ್ಡಿಎಗೆ ಬಹುಮತ ಸಿಕ್ಕಿದ್ದರೂ ಅಸಲಿ ರಿಸಲ್ಟ್ ಏನಾಗುತ್ತೆ ಎಂಬುದೇ ರಣರೋಚಕವಾಗಿದೆ.














