ನಯನತಾರಾ ತಮ್ಮ ಪತಿಯೊಂದಿಗೆ ಕರ್ನಾಟಕದ ಪ್ರಸಿದ್ಧ ಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ನೆರವೇರಿಸಿದ್ದಾರೆ. ಈ ಹಿಂದೆ ವಿಘ್ನಗಳು ಎದುರಾದಾಗ ಅನೇಕ ನಟ-ನಟಿಯರು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರ್ಪ ಸಂಸ್ಕಾರ, ಸರ್ಪ ಶಾಂತಿ, ರಾಹು-ಕೇತು ಪೂಜೆ ನೆರವೇರಿಸಿದ್ದಾರೆ. ಈಗಲೂ ಅದು ಮುಂದವರಿಯುತ್ತಿದೆ.
ಬಾಲಿವುಡ್ ನಟಿ ಕತ್ರಿನಾ ಕೈಫ್, ಶಿಲ್ಪಾ ಶೆಟ್ಟಿ ಇನ್ನೂ ಹಲವಾರು ಸೆಲೆಬ್ರಿಟಿಗಳು ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಮಾಡಿಸಿದ್ದಾರೆ. ಕೆಲವರು ಸಂತಾನ ಫಲ ದೊರೆಯದ ಕಾರಣ ಈ ಕ್ಷೇತ್ರದಲ್ಲಿ ವಿಶೇಷ ಪೂಜೆ ಮಾಡಿಸುವ ಮೂಲಕ ಸಂತಾನ ಪ್ರಾಪ್ತಿ ದಕ್ಕಿಸಿಕೊಂಡಿದ್ದಾರೆ.
ಈ ನಿಟ್ಟಿನಲ್ಲಿ ಪವರ್ ಜೋಡಿ ಎಂದೇ ಖ್ಯಾತಿಯಾಗಿರುವ ನಯನತಾರಾ ಮತ್ತು ವಿಘ್ನೇಶ್ ಶಿವನ್ ದಂಪತಿ ಜೋಡಿ, ಇತ್ತೀಚೆಗೆ ಕರ್ನಾಟಕದ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿತ್ತು. ದೇವಸ್ಥಾನದ ಮುಂಭಾಗ ಪತಿ ವಿಘ್ನೇಶ್ ಜೊತೆಗೆ ತೆಗೆಸಿದ ಫೋಟೋವೊಂದನ್ನ ನಯನತಾರಾ ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಯನತಾರಾ ನಿರ್ಮಾಣದ ಹಾಗೂ ವಿಘ್ನೇಶ್ ನಿರ್ದೇಶದ ಲವ್ ಇನ್ಶುರೆನ್ಸ್ ಕೊಂಪನಿ ಚಿತ್ರವು ಮುಂದಿನ ಡಿಸೆಂಬರ್ 18ರಂದು ತೆರೆಗೆ ಬರಲಿದೆ. ಪ್ರದೀಪ್ ರಂಗನಾಥನ್ ಮತ್ತು ಕೃತಿ ಶೆಟ್ಟಿ ತಾರಾಗಣದಲ್ಲಿದ್ದಾರೆ. ಅಕ್ಟೋಬರ್ 17ರಂದೇ ಈ ಚಿತ್ರ ತೆರೆಗೆ ಬರಲು ಸಜ್ಜಾಗಿತ್ತು, ಆದ್ರೆ ʻಡ್ಯೂಡ್ʼ ಸಿನಿಮಾ ರಿಲೀಸ್‌ನಿಂದಾಗಿ ದಿನಾಂಕವನ್ನ ಡಿ.18ಕ್ಕೆ ಮುಂದೂಡಲಾಯಿತು.
ಭಾರತದ ಕೆಲವೇ ಕೆಲವು ನಾಗ ಕ್ಷೇತ್ರಗಲ್ಲಿ ನಮ್ಮ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನರುವ ಈ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನವು ಒಂದಾಗಿದೆ. ಈ ಆಲಯವು ವಿಶೇಷವಾಗಿ ಕಾರ್ತಿಕೇಯ, ಮುರುಗನ್, ಷಣ್ಮುಖ, ಸುಬ್ರಹ್ಮಣ್ಯ ಸ್ವಾಮಿ ಎಂದು ಕರೆಯಲ್ಪಡುವ ಶಿವನ ಮಗನಿಗೆ ಸಮರ್ಪಿತವಾಗಿದೆ.
ಈ ದೇವಸ್ಥಾನದಲ್ಲಿ ಕಾರ್ತಿಕೇಯನನ್ನು ‘ಸರ್ಪ ರೂಪ’ದಲ್ಲಿ ಆರಾಧಿಸಲಾಗುತ್ತದೆ. ಈ ಕ್ಷೇತ್ರವು ವಿಶೇಷವಾಗಿ ಸರ್ಪ ದೋಷ ನಿವಾರಣೆಗಾಗಿ ಪ್ರಸಿದ್ಧಿ ಹೊಂದಿದೆ. ಜನರು ಇಲ್ಲಿ ಸರ್ಪ ಸಂಸ್ಕಾರ, ನಾಗಪ್ರತಿಷ್ಠೆ, ಆಶ್ಮೇಷಬಲಿ ಸೇರಿದಂತೆ ಇನ್ನು ವಿವಿಧ ಪೂಜೆಗಳನ್ನು ಮಾಡಿಸುವ ಮೂಲಕ ನಾಗದೋಷದಿಂದ ಮುಕ್ತರಾಗುತ್ತಾರೆ.














