ಮನೆ ರಾಜ್ಯ ದೆಹಲಿಯಲ್ಲಿ ವಿಷವಾಗುತ್ತಿದೆ ಉಸಿರಾಡುವ ಗಾಳಿ – ವರ್ಕ್ ಫ್ರಂ ಹೋಮ್‌ಗೆ ಶಿಫಾರಸು

ದೆಹಲಿಯಲ್ಲಿ ವಿಷವಾಗುತ್ತಿದೆ ಉಸಿರಾಡುವ ಗಾಳಿ – ವರ್ಕ್ ಫ್ರಂ ಹೋಮ್‌ಗೆ ಶಿಫಾರಸು

0

ನವದೆಹಲಿ : ರಾಷ್ಟ್ರ ರಾಜಧಾನಿ ದಿನೇ ದಿನೇ ಗ್ಯಾಸ್ ಚೇಂಬರ್ ಆಗಿ ಬದಲಾಗುತ್ತಿದೆ. ಅದರಂತೆ ದೆಹಲಿ ವಾಯು ಗುಣಮಟ್ಟ ಮತ್ತಷ್ಟು ಕಳಪೆಯಾಗಿದೆ. ಹೀಗಾಗಿ, ರಾಜಧಾನಿಗೆ ವಿಷಕಾರಿ ಗಾಳಿಯಿಂದ ಸದ್ಯಕ್ಕೆ ಮುಕ್ತಿ ಸಿಗುವ ಲಕ್ಷಣ ಇಲ್ಲ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ನೀಡಿದೆ.

ನಿನ್ನೆಯಷ್ಟೇ 373 ರಷ್ಟಿದ್ದ ವಾಯುಗುಣಮಟ್ಟ ಇಂದು 360ಕ್ಕೆ ತಲುಪಿದ್ದು, ದೆಹಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿದೆ. ಹೀಗಾಗಿ ಸ್ವಲ್ಪ ಸಮಯ ರಾಜಧಾನಿಯನ್ನು ತೊರೆಯುವುದು ಅಥವಾ ಮನೆಯಲ್ಲಿಯೇ ಇರುವುದು ಉತ್ತಮವಾಗಿದೆ. ಅದಕ್ಕೆ ತಕ್ಕಂತೆ ವಾಯು ಗುಣಮಟ್ಟ ನಿರ್ವಹಣಾ ಆಯೋಗವು ದೆಹಲಿ-ಎನ್‌ಸಿಆರ್‌ನಾದ್ಯಂತ 3ನೇ ಹಂತದ ಶ್ರೇಣೀಕೃತ ಪ್ರತಿಕ್ರಿಯೆ ಕ್ರಿಯಾ ಯೋಜನೆಯ ಕ್ರಮಗಳನ್ನು ಜಾರಿಗೊಳಿಸಿದೆ.

GRAP-3 ನಿಯಮದ ಅನ್ವಯ ಎಲ್ಲಾ ಸರ್ಕಾರಿ, ಖಾಸಗಿ ಹಾಗೂ ಪುರಸಭೆಯ ಕಚೇರಿಗಳಲ್ಲಿ 50% ಸಿಬ್ಬಂದಿ ಮಾತ್ರ ಕಾರ್ಯ ನಿರ್ವಹಿಸುವಂತೆ ಶಿಫಾರಸು ಮಾಡಲಾಗಿದೆ. ಆದ್ರೆ ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ಉದ್ಯೋಗಿಗಳು ಸಂಪೂರ್ಣ ಮನೆಯಿಂದಲೇ ಕೆಲಸ ಮಾಡುವಂತೆ ಕ್ರಮ ವಹಿಸಲು ಸಲಹೆ ಕೊಟ್ಟಿದೆ. ಒಂದು ವೇಳೆ ವಾಯುಗುಣಮಟ್ಟ, ಕಳಪೆ ಮಟ್ಟಕ್ಕೆ ಕುಸಿದರೆ ಗ್ರಾಪ್‌-4 ನಿಯಮಗಳನ್ನು ಜಾರಿಗೊಳಿಸುವಂತೆ ವಾಯು ಗುಣಮಟ್ಟ ನಿರ್ವಹಣಾ ಆಯೋಗವು ಸರ್ಕಾರಕ್ಕೆ ಸಲಹೆ ನೀಡಿದೆ.

ದೆಹಲಿಯಲ್ಲಿ ಕನಿಷ್ಠ ತಾಪಮಾನ 11.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಗರಿಷ್ಠ ತಾಪಮಾನ 28.2 ಡಿಗ್ರಿ ಸೆಲ್ಸಿಯಸ್ ತಲುಪುವ ಸಾಧ್ಯತೆ ಇದೆ. ಈಗಾಗಲೇ ದೆಹಲಿ ಸರ್ಕಾರ ಶಾಲೆಗಳು ಹೊರಾಂಗಣ ಚಟುವಟಿಕೆಗಳು ಹಾಗೂ ಕ್ರೀಡೆಗಳನ್ನು ಸ್ಥಗಿತಗೊಳಿಸುವಂತೆ ಆದೇಶಿಸಿದೆ. ಅಲ್ಲದೇ ವಾಯುಗುಣಮಟ್ಟ ಕುಸಿತವು ಮಕ್ಕಳ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿರುವುದರಿಂದ ವಿಶ್ವವಿದ್ಯಾಲಯಗಳು, ಕಾಲೇಜುಗಳು ಮತ್ತು ಮಾನ್ಯತೆ ಪಡೆದ ಕ್ರೀಡಾ ಸಂಘಗಳಿಗೆ ಈ ಸಲಹೆ ನೀಡಿದೆ.