ಬೆಂಗಳೂರು/ನವದೆಹಲಿ : ಕಾಂಗ್ರೆಸ್ ಸರ್ಕಾರ ಎರಡೂವರೆ ವರ್ಷ ಪೂರೈಸಿದ ಬೆನ್ನಲ್ಲೇ ʻಕುರ್ಚಿ ಕಿತ್ತಾಟʼ ದಿನದಿಂದ ದಿನಕ್ಕೆ ಜೋರಾಗುತ್ತಿದೆ. ಅಧಿಕಾರ ಹಂಚಿಕೆ ಸಂಬಂಧ ಜಿದ್ದಿಗೆ ಬಿದ್ದಂತೆ ಆಡ್ತಿರುವ ಸಿಎಂ ಸಿದ್ದರಾಮಯ್ಯ-ಡಿಸಿಎಂ ಡಿಕೆಶಿ ಬಣದ ನಾಯಕರು ಪರಸ್ಪರ ಸಭೆ ನಡೆಸುತ್ತಿದ್ದಾರೆ. ಈ ನಡುವೆ ಡಿಸಿಎಂ ಡಿಕೆ ಶಿವಕುಮಾರ್ ಬೆಂಬಲಿತ ಮತ್ತೊಂದು ಬಣ ದೆಹಲಿಗೆ ಎಂಟ್ರಿ ಕೊಟ್ಟಿದೆ.
ಶಾಸಕರಾದ ಬಾಲಕೃಷ್ಣ, ಉದಯ್ ಕದಲೂರು, ನಯನ ಮೋಟಮ್ಮ, ಇಕ್ಬಾಲ್ ಹುಸೇನ್ ಹಾಗೂ ಶರತ್ ಬಚ್ಚೆಗೌಡ ಟೀಂ ತಡರಾತ್ರಿಯೇ ದೆಹಲಿಗೆ ಆಗಮಿಸಿದೆ. ಇಂದು ಹೈಕಮಾಂಡ್ ಭೇಟಿ ಮಾಡಿ ಅಧಿಕಾರ ಹಂಚಿಕೆ ಬಗ್ಗೆ ಮಾತುಕತೆ ನಡೆಸಲು ಮುಂದಾಗಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.
ಡಿಕೆಶಿ ಬೆಂಬಲಿತ ಮತ್ತೊಂದು ಬಣ ದೆಹಲಿ ಪರೇಡ್ ನಡೆಸಿರುವ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಬೆಂಬಲಿತ ಬಣದಲ್ಲಿ ತೀವ್ರ ಅಸಮಾಧಾಣ ಭುಗಿಲೆದ್ದಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಹೈಕಮಾಂಡ್ ಸೂಚನೆ ಮೀರಿ ಮತ್ತೆ ದೆಹಲಿಗೆ ಹೋಗಿದ್ದಕ್ಕೆ ಅಸಮಾಧಾನ ವ್ಯಕ್ತವಾಹಿದೆ. ಖರ್ಗೆಯವರಿಗೆ ಡಿಕೆಶಿ ತಂಡದ ಶಾಸಕರ ಶಿಸ್ತು ಉಲ್ಲಂಘನೆ ಗಮನಕ್ಕೆ ತರಲಾಗಿತ್ತು, ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಕೂಡ ವಾರ್ನಿಂಗ್ ಕೊಟ್ಟಿದ್ರು. ಇಷ್ಟಿದ್ರೂ ಡಿಕೆಶಿ ಬಣ ಕ್ಯಾರೆ ಎನ್ನದೇ ದೆಹಲಿ ಪರೇಡ್ ನಡೆಸಿದೆ.
ಇದರಿಂದ ಅಸಮಾಧಾನಗೊಂಡಿರುವ ಸಿದ್ದರಾಮಯ್ಯ ಬಣದ ಸಚಿವರಿಂದ ಮತ್ತೊಂದು ಸಭೆ ನಡೆಸುವ ಸಾಧ್ಯತೆಗಳಿವೆ. ಈಗ ಸುಮ್ಮನಿದ್ದರೆ ಮುಂದೆ ಕಷ್ಟ ಕಾಲ ಕಟ್ಟಿಟ್ಟ ಬುತ್ತಿ. ಮುಂದಿನ ಕಾರ್ಯತಂತ್ರಗಳನ್ನ ಚರ್ಚಿಸಿ ಕೂಡಲೇ ಕಾರ್ಯಗತಗೊಳಿಸಲು ಚಿಂತನೆ ನಡೆಸಿದೆ ಎಂದು ಪಕ್ಷದ ಆಪ್ತ ಮೂಲಗಳು ತಿಳಿಸಿವೆ.














