ಮನೆ ಅಪರಾಧ ವಿವಾಹಿತೆ ಜೊತೆ ಪ್ರೀತಿ: ಮದುವೆಗೆ ಒತ್ತಾಯಿಸಿದ್ದಕ್ಕೆ ಕಾನ್ಸ್ ಟೇಬಲ್ ಪರಾರಿ

ವಿವಾಹಿತೆ ಜೊತೆ ಪ್ರೀತಿ: ಮದುವೆಗೆ ಒತ್ತಾಯಿಸಿದ್ದಕ್ಕೆ ಕಾನ್ಸ್ ಟೇಬಲ್ ಪರಾರಿ

0

ಚಾಮರಾಜನಗರ(Chamarajanagara): ಕಳೆದ ಒಂದು ವರ್ಷದಿಂದ ವಿವಾಹಿತ ಮಹಿಳೆಯನ್ನು ಪ್ರೀತಿಸಿ, ನಿರಂತರ ದೈಹಿಕ ಸಂಪರ್ಕ ಬೆಳೆಸಿದ್ದ ಕಾನ್ಸ್ ಟೇಬಲ್, ಮಹಿಳೆ ಮದುವೆಗೆ ಒತ್ತಾಯಿಸಿದ ನಂತರ ನಾಪತ್ತೆಯಾಗಿರುವ ಘಟನೆ ಯಳ‌ಂದೂರು ತಾಲೂಕಿನ ಗುಂಬಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಚಾಮರಾಜನಗರ ಪಟ್ಟಣ ಠಾಣೆ ಪೊಲೀಸ್ ಕಾನ್ಸ್‌ಟೇಬಲ್ ಶಂಕರ್ ಎಂಬುವವರು ನಾಪತ್ತೆಯಾಗಿದ್ದು, ಇವರ ವಿರುದ್ಧ 27 ವರ್ಷದ ವಿವಾಹಿತೆ ಯಳಂದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ತನ್ನ ಮೇಲೆ ನಿರಂತರ ಅತ್ಯಾಚಾರವೆಸಗಿ, ಮದುವೆ ಆಗು ಎಂದಿದ್ದಕ್ಕೆ ಕೊಲೆ ಬೆದರಿಕೆ ಹಾಕಿದ್ದಾರೆ. ನನಗೆ ನ್ಯಾಯ ಕೊಡಿಸಿ ಎಂದು ಮಹಿಳೆ ಅಳಲು ತೋಡಿಕೊಂಡಿದ್ದಾರೆ.

ಪ್ರಕರಣದ ವಿವರ:  ವಿವಾಹಿತೆಗೆ ಈಗಾಗಲೇ ಎರಡು ಮಕ್ಕಳಿದ್ದು, ಕೌಟಂಬಿಕ ಕಲಹದಿಂದಾಗಿ ತವರು ಮನೆಗೆ ವಾಪಸಾಗಿದ್ದಾರೆ. ಈ ವೇಳೆ ಕಾನ್ಸ್‌ಟೇಬಲ್ ಶಂಕರ್ ಹಳೇ ಪರಿಚಯದ ಮಾತುಕತೆ ಪ್ರೀತಿಗೆ ತಿರುಗಿದೆ. ಕಳೆದ 1 ವರ್ಷದಿಂದ ಮಹಿಳೆಯ ಮೇಲೆ ಶಂಕರ್​ ನಿರಂತರ ಅತ್ಯಾಚಾರ ಎಸಗಿದ್ದು, ವಿವಾಹಿತೆ ಮದುವೆ ಆಗು ಎಂದಿದ್ದಕ್ಕೆ ಕಾನ್ಸ್‌ಟೇಬಲ್ ನಿರಾಕರಿಸಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ಪಂಚಾಯ್ತಿ, ಹಿರಿಯರ ನಡುವೆ ಮಾತುಕತೆಯೂ ಆಗಿದೆ. ಮದುವೆಗೆ ಕಾನ್ಸ್‌ಟೇಬಲ್ ಒಪ್ಪಿಲ್ಲ ಎಂದು ತಿಳಿದುಬಂದಿದೆ. ಕೊನೆಗೆ, ನ್ಯಾಯಕ್ಕಾಗಿ ವಿವಾಹಿತೆ ಯಳಂದೂರು ಠಾಣೆಗೆ ದೂರು ಕೊಟ್ಟಿದ್ದರಿಂದ ಅತ್ಯಾಚಾರ ಮತ್ತು ಕೊಲೆ ಬೆದರಿಕೆಯಡಿಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಶಂಕರ್ ಪರಾರಿಯಾಗಿದ್ದಾರೆ. ಯಳಂದೂರು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.