ಚೆನ್ನೈ : ತಮಿಳುನಾಡಿನಲ್ಲಿ ಸಚಿವರೊಬ್ಬರ ಮುಂದೆಯೇ ಮಹಿಳೆಯರು ಅರೆಬರೆ ಬಟ್ಟೆ ತೊಟ್ಟು ಅಶ್ಲೀಲ ನೃತ್ಯ ಪ್ರದರ್ಶನ ಮಾಡಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತಮಿಳುನಾಡು ಡಿಸಿಎಂ ಉದಯನಿಧಿ ಸ್ಟಾಲಿನ್ ಹುಟ್ಟುಹಬ್ಬ ಆಚರಣೆ ಕಾರ್ಯಕ್ರಮವನ್ನು ಶಿವಗಂಗಾದಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ತಮಿಳುನಾಡಿನ ಸಚಿವ ಎಸ್. ಪೆರಿಯಕರುಪ್ಪನ್ ಭಾಗಿಯಾಗಿದ್ದರು. ಯುವತಿಯರು ಅಸಭ್ಯವಾಗಿ ಅರೆಬರೆ ತೊಟ್ಟು ಡ್ಯಾನ್ಸ್ ಮಾಡುವಾಗ ಅವರು ಚಪ್ಪಾಳೆ ತಟ್ಟಿ ಸಂಭ್ರಮಿಸಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.
ಈ ಘಟನೆಯನ್ನು ವಿರೋಧ ಪಕ್ಷ ಬಿಜೆಪಿ ತೀವ್ರವಾಗಿ ಖಂಡಿಸಿದೆ. ಇದು ತಮಿಳು ಸಂಸ್ಕೃತಿ ಮತ್ತು ಮಹಿಳೆಯರ ಘನತೆಯ ನಾಶ ಎಂದು ಸಚಿವರ ವಿರುದ್ಧ ಮುಗಿಬಿದ್ದಿದೆ. ಕೇವಲ ಮೋಜು ಮಸ್ತಿ ಮಾಡಲು ಸರ್ಕಾರಿ ಹುದ್ದೆ ಏಕೆ ಬೇಕು? ಯಾವುದೇ ಅರ್ಹತೆಗಳಿಲ್ಲದೆ, ಆನುವಂಶಿಕ ಉತ್ತರಾಧಿಕಾರದ ಆಧಾರದ ಮೇಲೆ ಉಪಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತಿರುವ ವ್ಯಕ್ತಿಯ ಜನ್ಮದಿನಾಚರಣೆ ಮಾಡುವುದು ಗುಲಾಮಗಿರಿ ಮನಸ್ಥಿತಿ ಎಂದು ಕಿಡಿಕಾರಿದೆ.
ಅಶ್ಲೀಲ ಪ್ರದರ್ಶನ ಮಾಡಿ ಅವರನ್ನು ಹೊಗಳುವುದು ದೊಡ್ಡ ಅವಮಾನ. ಅಂತಹ ಜನರಿಗೆ ಸ್ವಾಭಿಮಾನ, ತರ್ಕಬದ್ಧ ಚಿಂತನೆಯ ಬಗ್ಗೆ ಮಾತನಾಡಲು ಕನಿಷ್ಠ ಅರ್ಹತೆಯಾದರೂ ಇದೆಯೇ? ಎಂದು ಬಿಜೆಪಿ ಪ್ರಶ್ನಿಸಿದೆ. ಸಚಿವರು ಮಹಿಳೆಯರಿಗೆ ನೃತ್ಯ ಮಾಡಲು ಸೂಚಿಸಿದ್ದಾರೆ ಎಂಬ ಆರೋಪವನ್ನು ಡಿಎಂಕೆ ನಿರಾಕರಿಸಿದೆ. ಮಹಿಳೆಯರು ತಾವಾಗಿಯೇ ವೇದಿಕೆಯಿಂದ ಇಳಿದು ಸಚಿವರ ಮುಂದೆ ನೃತ್ಯ ಮಾಡಲು ಪ್ರಾರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.















