ಬೆಂಗಳೂರು(Bengaluru): ರಾಷ್ಟ್ರೀಯ ಶಿಕ್ಷಣ ನೀತಿ ಕೌಶಲಗಳಿಗೆ ಒತ್ತು ಕೊಡುತ್ತದೆ. ನಮ್ಮ ರಾಜ್ಯದಲ್ಲಿ ಎನ್ ಇ ಪಿ ಅಳವಡಿಸಿರುವ ಮಾದರಿಯನ್ನು ದೇಶದ ಬೇರೆ ರಾಜ್ಯಗಳು ಅನುಸರಿಸುತ್ತಿವೆ ಎಂದು ಕೌಶಲ್ಯಾಭಿವೃದ್ಧಿ ಸಚಿವ ಅಶ್ವಥ್ ನಾರಾಯಣ್ ತಿಳಿಸಿದರು.
ಕೌಶಲ್ಯ ಕರ್ನಾಟಕ’ ಮತ್ತು ‘ದೇಶಪಾಡೆ ಫೌಂಡೇಷನ್’ ವತಿಯಿಂದ ಐಟಿ/ ಐಟಿಇಎಸ್ ವಲಯದ ಉದ್ಯಮ ನಾಯಕರು ಮತ್ತು ನವೋದ್ಯಮಿಗಳೊಂದಿಗೆ “ಕರ್ನಾಟಕವನ್ನು ಕೌಶಲ್ಯ ಪೂರ್ಣವಾಗಿಸುವುದು” ಕುರಿತು ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರಾಜ್ಯದಲ್ಲಿ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಸಂಯೋಜನೆಗೊಳಿಸಲಾಗಿದ್ದು, ನಾವು ಅನುಷ್ಠಾನಗೊಳಿಸಿದ ಎಲ್ ಎಂಎಸ್ ಉತ್ತಮ ಗುಣಮಟ್ಟದಿಂದ ಕೂಡಿದೆ. ಕಲಿಕಾ ರೀತಿ ಸಂಪೂರ್ಣ ಬದಲಾಗಿದೆ. ಡಿಜಿಟಲ್ ಸಾಕ್ಷರತೆ, ಆರ್ಥಿಕ ಸಾಕ್ಷರತೆ, ಆರೋಗ್ಯ ಮತ್ತು ಸ್ವಾಸ್ಥ್ಯ, ಇವುಗಳನ್ನು ಕಡ್ಡಾಯಗೊಳಿಸಲಾಗಿದೆ. ಎಂದು ವಿವರಿಸಿದರು.
ಉದ್ಯಮಗಳ ಬೇಡಿಕೆಗೆ ತಕ್ಕಂತೆ ಕೌಶಲ್ಯ ತರಬೇತಿ ನೀಡಲು ಸರ್ಕಾರ ಬದ್ಧವಾಗಿದೆ. ಪ್ರತಿಯೊಬ್ಬ ವ್ಯಕ್ತಿಯನ್ನೂ ಉತ್ಪಾದಕನನ್ನಾಗಿ ಮಾಡುವ ದಿಸೆಯಲ್ಲಿ ಅವಕಾಶಗಳನ್ನು ಸೃಷ್ಟಿಸುವುದೇ ಸರ್ಕಾರದ ಗುರಿಯಾಗಿದೆ ಎಂದು ಹೇಳಿದರು.
ರಾಜ್ಯದ ಕಾಲೇಜುಗಳಲ್ಲಿ ಒಟ್ಟಾರೆ ಪ್ರವೇಶಾತಿ ಅನುಪಾತ (ಜಿಇಆರ್) ಕಳೆದ 3 ವರ್ಷಗಳಲ್ಲಿ ಶೇ 6ಕ್ಕಿಂತಲೂ ಜಾಸ್ತಿಯಾಗಿದೆ. ಪಾಲಿಟೆಕ್ನಿಕ್ ಗೆ ಸೇರುವವರ ಸಂಖ್ಯೆ 30,000ದಿಂದ 75,000ಕ್ಕೆ ಜಾಸ್ತಿಯಾಗಿದೆ, ಜಿಟಿಟಿಸಿ ಮತ್ತು ಐಟಿಟಿ ಜನಪ್ರಿಯಗೊಂಡಿವೆ. ಒಟ್ಟಾರೆ, ವೈಟ್ ಕಾಲರ್ ವಲಯವಿರಲಿ ಅಥವಾ ಬ್ಲೂ ಕಾಲರ್ ವಲಯವಿರಲಿ ರಾಜ್ಯದಲ್ಲಿ ಮಾನವ ಸಂಪನ್ಮೂಲದ ಕೊರತೆ ಇರಬಾರದು ಎಂಬುದೇ ಸರ್ಕಾರದ ಧ್ಯೇಯವಾಗಿದೆ ಎಂದು ನುಡಿದರು.