ಮನೆ ರಾಜ್ಯ ಗವಿಸಿದ್ದೇಶ್ವರ ಮಠಕ್ಕೆ 10 ಕೋಟಿ ರೂ. ಬಿಡುಗಡೆ: ಸಿಎಂ ಬೊಮ್ಮಾಯಿ ಆದೇಶ

ಗವಿಸಿದ್ದೇಶ್ವರ ಮಠಕ್ಕೆ 10 ಕೋಟಿ ರೂ. ಬಿಡುಗಡೆ: ಸಿಎಂ ಬೊಮ್ಮಾಯಿ ಆದೇಶ

0

ಕೊಪ್ಪಳ (Koppala): ಗವಿಸಿದ್ದೇಶ್ವರ ಮಠದಲ್ಲಿ ಉಚಿತ ವಸತಿ ಹಾಗೂ ಪ್ರಸಾದ ನಿಲಯ ನಿರ್ಮಾಣಕ್ಕೆ 10 ಕೋಟಿ ರೂ. ನೀಡಲು ರಾಜ್ಯ ಸರ್ಕಾರದ ನಿರ್ಧರಿಸಿದೆ.

ಕೊಪ್ಪಳ ಸಂಸದ ಸಂಗಣ್ಣ ಕರಡಿ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಈ ಕುರಿತು ಮಾಡಿದ ಮನವಿಗೆ ಸ್ಪಂದಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಠದಲ್ಲಿ ಉಚಿತ ವಸತಿ ಹಾಗೂ ಪ್ರಸಾದ ನಿಲಯ ನಿರ್ಮಾಣಕ್ಕೆ 10 ಕೋಟಿ ರೂ. ನೀಡಲು ಆದೇಶಿಸಿದ್ದಾರೆ.

ಒಂದು ವಾರದ ಹಿಂದೆ ಗವಿಮಠದ ಆವರಣದಲ್ಲಿ ಐದು ಸಾವಿರ ವಿದ್ಯಾರ್ಥಿಗಳಿಗೆ ಉಚಿತ ವಸತಿ ನಿಲಯ ಹಾಗೂ ಪ್ರಸಾದ ನಿಲಯ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಭೂಮಿ ಪೂಜೆ ಸಲ್ಲಿಸುವ ವೇಳೆ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ, ‘ಮಕ್ಕಳು ವಿದ್ಯಾವಂತರಾಗಬೇಕು ಎಂಬುದು ಮಠದ ಸಂಕಲ್ಪವಾಗಿದೆ. ಎಷ್ಟು ಶಕ್ತಿ ಇದೆಯೊ ಅಷ್ಟೂ ಮಕ್ಕಳನ್ನು ಓದಿಸುವೆ. ಅವರ ಏಳಿಗೆಗಾಗಿ ಜೋಳಿಗೆ ಹಿಡಿಯುವೆʼ ಎಂದು ಭಾವುಕರಾಗಿ ಹೇಳಿದ್ದರು.

ಅವರ ಈ ಮಾತುಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡಿತ್ತು. ಕೋಟ್ಯಂತರ ಜನ ಈ ವಿಡಿಯೋ ವೀಕ್ಷಿಸಿದ್ದಾರೆ. ಇದರಿಂದ ಸ್ವಯಂ ಪ್ರೇರಿತರಾಗಿ ಇದು ತಮ್ಮದೇ ಕೆಲಸ ಎನ್ನುವಂತೆ ಭಕ್ತರು ದೇಣಿಗೆ ಸಂಗ್ರಹಿಸುತ್ತಿದ್ದಾರೆ.

ಜಿಲ್ಲೆ ಹಾಗೂ ಹೊರ ಜಿಲ್ಲೆಗಳ ಭಕ್ತರು ಸ್ವಯಂ ಪ್ರೇರಿತರಾಗಿ ತಮ್ಮೂರಿನಲ್ಲಿ ಹಣ ಸಂಗ್ರಹಿಸಿ ಮಠಕ್ಕೆ ದೇಣಿಗೆ ಸಲ್ಲಿಸುತ್ತಿದ್ದಾರೆ. ಮಠದ ಹಳೆಯ ವಿದ್ಯಾರ್ಥಿಗಳು ಕೂಡ ಹಣ ನೀಡುತ್ತಿದ್ದಾರೆ. ಭಕ್ತರು ಮಾಡುತ್ತಿರುವ ಈ ಕಾರ್ಯ ಬಹಳಷ್ಟು ಊರುಗಳಲ್ಲಿ ಸಂಚಲನ ಮೂಡಿಸಿದ್ದು, ದಿನದಿಂದ ದಿನಕ್ಕೆ ಹಣ ಸಂಗ್ರಹಿಸಿ ಮಠಕ್ಕೆ ಸಲ್ಲಿಸುತ್ತಿರುವ ಕಾರ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಕಾರಟಗಿಯ ವಿಶೇಷ ಎಪಿಎಂಸಿ ಮಾಜಿ ಸದಸ್ಯ ಶರಣೇಗೌಡ ಪಾಟೀಲ್ ಸಾಹುಕಾರ ಅವರು, ತಮ್ಮ ಪುತ್ರಿಯ ಮದುವೆಯಲ್ಲಿ ಸ್ನೇಹಿತರು ಹಾಗೂ ಬಂಧುಗಳು ಪ್ರೀತಿಯಿಂದ ಕೊಟ್ಟ 5 ಸಾವಿರ ರೂ. ಕಾಣಿಕೆಯನ್ನು ಮಠಕ್ಕೆ ದೇಣಿಗೆಯಾಗಿ ನೀಡಿದ್ದಾರೆ.

ಕಾರಟಗಿ ತಾಲ್ಲೂಕಿನ ಸಿದ್ದಾಪುರದಲ್ಲಿ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳು ದೇಣಿಗೆ ಸಂಗ್ರಹಿಸಿದರು. ಮುನಿರಾಬಾದ್‌ ಸಮೀಪದ ಹೊಸಹಳ್ಳಿಯಲ್ಲಿ ಗ್ರಾಮಸ್ಥರು ಡಬ್ಬಿ ಹಿಡಿದು ಗ್ರಾಮದಲ್ಲಿ ಸಂಚರಿಸಿ 30,170 ರೂ. ಸಂಗ್ರಹಿಸಿ ಮಠಕ್ಕೆ ಅರ್ಪಿಸಿದ್ದಾರೆ.