ಮನೆ ರಾಷ್ಟ್ರೀಯ ಬಹುಮತ ಸಾಬೀತುಪಡಿಸುವಂತೆ ಉದ್ಧವ್ ಠಾಕ್ರೆಗೆ ಸೂಚಿಸಿ: ರಾಜ್ಯಪಾಲರಲ್ಲಿ ದೇವೇಂದ್ರ ಫಡ್ನವಿಸ್ ಮನವಿ

ಬಹುಮತ ಸಾಬೀತುಪಡಿಸುವಂತೆ ಉದ್ಧವ್ ಠಾಕ್ರೆಗೆ ಸೂಚಿಸಿ: ರಾಜ್ಯಪಾಲರಲ್ಲಿ ದೇವೇಂದ್ರ ಫಡ್ನವಿಸ್ ಮನವಿ

0

ಮುಂಬೈ (Mumbai): ಮಹಾರಾಷ್ಟ್ರ ಪ್ರತಿಪಕ್ಷದ ನಾಯಕ ದೇವೇಂದ್ರ ಫಡ್ನವಿಸ್ ಅವರನ್ನೊಳಗೊಂಡ ಬಿಜೆಪಿ ನಾಯಕರ ನಿಯೋಗ ಮಂಗಳವಾರ ರಾತ್ರಿ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರನ್ನು ಭೇಟಿಯಾಗಿದ್ದಾರೆ.

ಎಂವಿಎ ಸರ್ಕಾರ ಬಹುಮತ ಕಳೆದುಕೊಂಡಿದ್ದು ವಿಶ್ವಾಸಮತಯಾಚಿಸುವಂತೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಸೂಚಿಸಬೇಕು ಎಂದು ಫಡ್ನವೀಸ್‌ ನಿಯೋಗ ಮನವಿ ಮಾಡಿದೆ.

ದೇವೇಂದ್ರ ಫಡ್ನವಿಸ್, ಆಶಿಶ್ ಶೆಲಾರ್, ಪ್ರವೀಣ್ ದಾರೇಕರ್ ಅವರನ್ನು ಒಳಗೊಂಡ ಬಿಜೆಪಿ ನಿಯೋಗ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರನ್ನು ಭೇಟಿ ಮಾಡಿದ್ದು, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಬಹುಮತ ಕಳೆದುಕೊಂಡಿದ್ದು, ವಿಶೇಷ ಅಧಿವೇಶನ ಕರೆದು, ವಿಶ್ವಾಸಮತ ಯಾಚನೆ ಮಾಡುವಂತೆ ಸೂಚಿಸಬೇಕು ಎಂದು ಮನವಿ ಮಾಡಿದ್ದಾರೆ.

ರಾಜ್ಯಪಾಲರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ  ದೇವೇಂದ್ರ ಫಡ್ನವಿಸ್ ಅವರು, ಮಾಧ್ಯಮಗಳಲ್ಲಿ ಬರುತ್ತಿರುವ ವರದಿಗಳ ಪ್ರಕಾರ, ಶಿವಸೇನೆಯ 39 ಶಾಸಕರಿಗೆ ಮಹಾ ವಿಕಾಸ್ ಅಘಾಡಿ ಸರ್ಕಾರದ ಬಗ್ಗೆ ಅಸಮಾಧಾನ ಇದ್ದು, ಅವರು ಈ ಸರ್ಕಾರದಿಂದ ಹೊರಬಂದಿದ್ದಾರೆ ಎಂದು ತೋರುತ್ತದೆ. ಶಿವಸೇನಾ ಶಾಸಕರ ಈ ನಿರ್ಧಾರದ ನಂತರ, ಉದ್ಧವ್ ಠಾಕ್ರೆ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ. ಅವರು ಸದನದಲ್ಲಿ ಬಹುಮತ ಸಾಬೀತುಪಡಿಸಬೇಕು ಎಂದು ಹೇಳಿದರು.

ನಾವು ರಾಜ್ಯಪಾಲರನ್ನು ಭೇಟಿ ಮಾಡಿ ಮಹಾರಾಷ್ಟ್ರದ ಪ್ರಸ್ತುತ ರಾಜಕೀಯ ಪರಿಸ್ಥಿತಿಯನ್ನು ಅವರಿಗೆ ತಿಳಿಸಿದ್ದೇವೆ. ಈಗ ಅವರು ನಿರ್ಧಾರ ತೆಗೆದುಕೊಳ್ಳಬೇಕು. ಸುಪ್ರೀಂ ಕೋರ್ಟ್ ನ ವಿವಿಧ ತೀರ್ಪಿನ ಪ್ರಕಾರ ಅವರು ವಿಶೇಷ ಅಧಿವೇಶನವನ್ನು ಕರೆಯಬಹುದು ಎಂದು ನಾವು ತಿಳಿಸಿದ್ದೇವೆ” ಎಂದು ಫಡ್ನವಿಸ್ ಹೇಳಿದ್ದಾರೆ.