ನವದೆಹಲಿ : ಮುಸ್ಲಿಮರ ತುಷ್ಟೀಕರಣಕ್ಕಾಗಿ ಕಾಂಗ್ರೆಸ್ ವಂದೇ ಮಾತರಂ ಹಾಡನ್ನು ಒಡೆದು ತುಂಡು ಮಾಡಿತು ಎಂದು ಪ್ರಧಾನಿ ನರೇಂದ್ರ ಮೋದಿ ಸಿಟ್ಟು ಹೊರಹಾಕಿದ್ದಾರೆ. ವಂದೇ ಮಾತರಂ ಹಾಡಿಗೆ 150 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ಇಂದು ಚರ್ಚೆ ಆರಂಭಿಸಿದ ಮೋದಿ, ವಂದೇ ಮಾತರಂ ವಿರುದ್ಧ ಜಿನ್ನಾ ನಡೆಸಿದ ಪ್ರತಿಭಟನೆಯನ್ನು ನೆಹರು ಬೆಂಬಲಿಸಿದರು. ಕೊನೆಗೆ ಕಾಂಗ್ರೆಸ್ ಮುಸ್ಲಿಂ ಲೀಗ್‌ಗೆ ತಲೆಬಾಗಿ ತುಂಡು ಮಾಡಿದರು ಎಂದು ವಾಗ್ದಾಳಿ ನಡೆಸಿದರು.
ವಂದೇ ಮಾತರಂ ವಿರುದ್ಧ ಮುಸ್ಲಿಂ ಲೀಗ್ ನೆಹರು ಅವರಿಗೆ ಪತ್ರ ಬರೆದು ಆಕ್ಷೇಪ ವ್ಯಕ್ತಪಡಿಸಿತು. ಮೊಹಮ್ಮದ್ ಅಲಿ ಜಿನ್ನಾ ಅದರ ವಿರುದ್ಧ ಘೋಷಣೆಗಳನ್ನು ಕೂಗಿದರು. ಆಗಿನ ಕಾಂಗ್ರೆಸ್ ಮುಖ್ಯಸ್ಥ ಜವಾಹರಲಾಲ್ ನೆಹರು ಜಿನ್ನಾ ಹೇಳಿಕೆಗಳನ್ನು ಖಂಡಿಸಲು ಹೋಗಲಿಲ್ಲ. ವಂದೇ ಮಾತರಂ ಬಗ್ಗೆ ತಮ್ಮ ಮತ್ತು ಪಕ್ಷದ ನಿಷ್ಠೆಯನ್ನು ವ್ಯಕ್ತಪಡಿಸುವ ಬದಲು ಜಿನ್ನಾ ವಿರೋಧಿಸಿದ ಕೇವಲ ಐದು ದಿನಗಳ ನಂತರ ವಂದೇ ಮಾತರಂ ಪರಿಶೀಲಿಸಲು ಆರಂಭಿಸಿದರು.
ಜಿನ್ನಾ ವಂದೇ ಮಾತರಂಗೆ ವಿರೋಧ ವ್ಯಕ್ತಪಡಿಸಿದ ನಂತರ ಪಂಡಿತ್ ಜವಾಹರಲಾಲ್ ನೆಹರು ಅವರು ಸುಭಾಷ್ ಚಂದ್ರ ಬೋಸ್ ಅವರಿಗೆ ಪತ್ರ ಬರೆದು, ವಂದೇ ಮಾತರಂನ ಹಿನ್ನೆಲೆಯನ್ನು ತಾವು ಓದಿರುವುದಾಗಿ ಮತ್ತು ಅದು ಮುಸ್ಲಿಮರನ್ನು ಕೆರಳಿಸಬಹುದು ಮತ್ತು ಕಿರಿಕಿರಿಯಾಗಬಹುದು ಎಂದು ಭಾವಿಸಿರುವುದಾಗಿ ಹೇಳಿದರು.
ವಂದೇ ಮಾತರಂ ಪರಿಶೀಲನೆಗೆ ಒಳಪಡಿಸಿದ ನಂತರ ದೇಶದ ದುರ್ಭಾಗ್ಯ ಎಂಬಂತೆ ಕಾಂಗ್ರೆಸ್ ಮುಸ್ಲಿಂ ಲೀಗ್ ಒತ್ತಡಕ್ಕೆ ತಲೆಬಾಗಿ ಹಾಡನ್ನು ಕತ್ತರಿಸಿತು. ಕಾಂಗ್ರೆಸ್ ತುಷ್ಟೀಕರಣದ ಒತ್ತಡದಲ್ಲಿ ವಂದೇ ಮಾತರಂ ಅನ್ನು ವಿಭಜಿಸಿತು ಎಂದು ಕಿಡಿಕಾರಿದರು.















