ಮನೆ ರಾಷ್ಟ್ರೀಯ ಉದ್ದವ್ ಠಾಕ್ರೆಗೆ ಅಗ್ನಿ ಪರೀಕ್ಷೆ: ಬಹುಮತ ಸಾಬೀತಿಗೆ ನಾಳೆಯೇ ಅಧಿವೇಶನ ಕರೆದ ರಾಜ್ಯಪಾಲರು

ಉದ್ದವ್ ಠಾಕ್ರೆಗೆ ಅಗ್ನಿ ಪರೀಕ್ಷೆ: ಬಹುಮತ ಸಾಬೀತಿಗೆ ನಾಳೆಯೇ ಅಧಿವೇಶನ ಕರೆದ ರಾಜ್ಯಪಾಲರು

0

ಮುಂಬೈ(Mumbai): ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ(ಎಂವಿಎ) ಸರ್ಕಾರಕ್ಕೆ ಅಗ್ನಿಪರೀಕ್ಷೆ ಎದುರಾಗಿದ್ದು, ನಾಳೆಯೇ ಬಹುಮತವನ್ನು ಸಾಬೀತುಪಡಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಸಿಎಂ ಉದ್ಧವ್ ಠಾಕ್ರೆ ಅವರು ವಿಶ್ವಾಸ ಮತ ಯಾಚಿಸುವ ಏಕೈಕ ಅಜೆಂಡಾದೊಂದಿಗೆ ಜೂನ್ 30 ರಂದು ಬೆಳಿಗ್ಗೆ 11 ಗಂಟೆಗೆ ರಾಜ್ಯ ವಿಧಾನಸಭೆಯ ವಿಶೇಷ ಅಧಿವೇಶನವನ್ನು ಕರೆಯುವಂತೆ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರು ವಿಧಾನಸಭೆಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

ಶಿವಸೇನೆಯ ಸುಮಾರು 39 ಶಾಸಕರು ಏಕನಾಥ್ ಶಿಂಧೆ ನೇತೃತ್ವದಲ್ಲಿ ಬಂಡೆದಿದ್ದು, ಗುವಾಹಟಿಗೆ ತೆರಳಿದ್ದಾರೆ. ಈ ಹಿನ್ನೆಲೆಯಲ್ಲಿ ನಿನ್ನೆ ರಾಜ್ಯಪಾಲರನ್ನು ಭೇಟಿ ಮಾಡಿದ್ದ ದೇವೇಂದ್ರ ಫಡಣವಿಸ್ ನೇತೃತ್ವದ ಬಿಜೆಪಿ ನಿಯೋಗ, ಬಹುಮತ ಸಾಬೀತಿಗೆ ಸಿಎಂ ಉದ್ಧವ್ ಠಾಕ್ರೆಗೆ ಸೂಚಿಸುವಂತೆ ಮನವಿ ಮಾಡಿತ್ತು.

ನಾವು ಇ-ಮೇಲ್ ಕಳುಹಿಸಿದ್ದೇವೆ ಮತ್ತು ಖುದ್ದು ರಾಜ್ಯಪಾಲರನ್ನು ಭೇಟಿ ಮಾಡಿ ಪತ್ರವನ್ನು ನೀಡಿದ್ದೇವೆ. ಶಿವಸೇನೆಯ 39 ಶಾಸಕರು ಹೊರಗಿದ್ದಾರೆ (ಗುವಾಹಟಿಯಲ್ಲಿ) ಮತ್ತು ಅವರು ಎನ್‌ಸಿಪಿ ಮತ್ತು ಕಾಂಗ್ರೆಸ್‌ನೊಂದಿಗೆ ಮುಂದುವರಿಯಲು ನಿರಾಕರಿಸಿದ್ದಾರೆ ಎಂದು ನಾವು ಅವರಿಗೆ ತಿಳಿಸಿದ್ದೇವೆ. ಇದರರ್ಥ ಅವರು(ಬಂಡಾಯ ಶಾಸಕರು) ಎಂವಿಎ ಜೊತೆ ಇರಲು ಬಯಸುವುದಿಲ್ಲ. ಅಂದರೆ, ಸರ್ಕಾರ ಬಹುಮತ ಕಳೆದುಕೊಂಡಿದೆ. ಆದ್ದರಿಂದ, ಬಹುಮತ ಸಾಬೀತುಪಡಿಸುವ ಅಗತ್ಯವಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ದೇವೇಂದ್ರ ಫಡಣವಿಸ್ ಮಂಗಳವಾರ ಹೇಳಿದ್ದರು.

ಈ ಮಧ್ಯೆ, ನಿನ್ನೆ, ಠಾಕ್ರೆ ಅವರು ಏಕನಾಥ್ ಶಿಂಧೆ ಬೆಂಬಲಿತ ಬಂಡಾಯ ಶಾಸಕರನ್ನು ಗುವಾಹಟಿಯಿಂದ ಹಿಂದಿರುಗುವಂತೆ ಕೋರಿದ್ದರು. ಕುಳಿತು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳೋಣ ಎಂದು ಭಾವನಾತ್ಮಕ ಮನವಿ ಮಾಡಿದ್ದರು.