ಶ್ರೀನಗರ : ಏಪ್ರಿಲ್ 22ರಂದು ಕಾಶ್ಮೀರದಲ್ಲಿ ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿ ಪ್ರಕರಣದ ತನಿಖೆ ನಡೆಸಿದ ರಾಷ್ಟ್ರೀಯ ತನಿಖಾ ಸಂಸ್ಥೆ ಇಂದು (ಡಿ.15) ದೋಷಾರೋಪ ಪಟ್ಟಿ ಸಲ್ಲಿಸಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ತನಿಖಾಧಿಕಾರಿಗಳ ಪ್ರಕಾರಗಳ, ಆಪರೇಷನ್ ಮಹಾದೇವ್ನಲ್ಲಿ ಹತ್ಯೆಯಾದ ಲಷ್ಕರ್-ಎ-ತೈಬಾ ಗುಂಪಿನ ಉಗ್ರರ ಹೆಸರನ್ನ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ. ಪಹಲ್ಗಾಮ್ ದಾಳಿಯು ಪ್ರತ್ಯೇಕ ಘಟನೆಯಾಗಿರಲಿಲ್ಲ. ಕಾಶ್ಮೀರದಲ್ಲಿ ಲಷ್ಕರ್ ಸಾಮ್ರಾಜ್ಯ ವಿಸ್ತರಿಸುವ ಹಾಗೂ ಸಂಘಟಿತ ಭಯೋತ್ಪಾದನಾ ಕಾರ್ಯತಂತ್ರದ ಭಾಗವಾಗಿತ್ತು ಎಂದು ಆರೋಪ ಪಟ್ಟಿಯಲ್ಲಿ ತಿಳಿಸಲಾಗಿದೆ.
ಆಪರೇಷನ್ ಮಹಾದೇವ್ನಲ್ಲಿ ಹತ್ಯೆಗೀಡಾದ ಉಗ್ರರಲ್ಲಿ ಇಬ್ಬರು, ಗುಜ್ಜರ್ ಮತ್ತು ಬಕ್ಕರ್ವಾಲ್ ಸಮುದಾಯಕ್ಕೆ ಸೇರಿದ ಸ್ಥಳೀಯರಿಂದ ನಿರಂತರ ಸಹಾಯ ಪಡೆದುಕೊಂಡಿದ್ದರು. ಇಡೀ ಸಮಯದಾಯದ ಜನ ಇದರಲ್ಲಿ ಭಾಗಿಯಾಗಿರಲಿಲ್ಲ. ಆಶ್ರಯ ನೀಡಿದ್ದ ಸ್ಥಳೀಯರು, ವ್ಯವಸ್ಥಿತ ಬೆಂಬಲ ನೀಡಿದ್ದರು. ಅಲ್ಲದೇ ನಿರ್ಣಾಯಕ ಮಾರ್ಗಗಳ ಬಗ್ಗೆ ಎಲ್ಲಾ ವಿವರ ಕೊಟ್ಟಿದ್ದರು. ಇದು ಉಗ್ರರು ಭದ್ರತಾಪಡೆಗಳಿಂದ ತಪ್ಪಿಸಿಕೊಂಡು ಅರಣ್ಯ ಪ್ರದೇಶದಲ್ಲಿ ಅಡಿಗಿಕೊಳ್ಳಲು ಸಹಾಯವಾಗಿತ್ತು ಎಂದು ಆರೋಪ ಪಟ್ಟಿಯಲ್ಲಿ ತಿಳಿಸಲಾಗಿದೆ.
ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾದ 3ನೇ ಆರೋಪಿ ಸಾಜಿದ್ ಜಾಟ್. ಗಡಿಯಾಚೆಗಿನ ಹ್ಯಾಂಡ್ಲರ್ಗಳ ನಿರ್ದೇಶನದಂತೆ ದೇಶದ ಒಳಗೆ ಕೆಲಸ ಮಾಡುವ ಸಕ್ರಿಯ ಲಷ್ಕರ್ ಕಾರ್ಯಕರ್ತನಾಗಿದ್ದ. ಸಾಜಿದ್ ಜಾಟ್ ನಿರ್ದಿಷ್ಟ ಮಾಡ್ಯೂಲ್ ಸಂಘಟಿಸುತ್ತಿದ್ದ. ಅಲ್ಲದೇ ಭಾರತಕ್ಕೆ ಬರುತ್ತಿದ್ದ ದಾಳಿಕೋರರಿಗೆ ಇಲ್ಲಿನ ಭದ್ರತಾಪಡೆಗಳ ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡುತ್ತಿದ್ದ ಎಂದು ತನಿಖಾಧಿಕಾರಿ ಮೂಳಗಳು ತಿಳಿಸಿವೆ.
ಉಗ್ರರ ಈ ಪಿತೂರಿಯಲ್ಲಿ ಸ್ಥಳೀಯರ ಸಹಕಾರ ಹೆಚ್ಚಾಗಿಯೇ ಇತ್ತು. ಪಹಲ್ಗಾಮ್ ದಾಳಿ ನಡೆಸುವುದಕ್ಕೆ ಮುನ್ನ ಉಗ್ರರಿಗೆ ಅಡಗುತಾಣಗಳ ವ್ಯವಸ್ಥೆ, ನಿಗದಿತ ಮಾರ್ಗ, ದಾಳಿ ಮಾಡಿದ ನಂತರ ತಮ್ಮ ಜೀವ ಉಳಿಸಿಕೊಳ್ಳಲು ಬೇಕಿರುವ ಎಲ್ಲಾ ಅಗತ್ಯ ನೆರವು ನೀಡಿದ್ದರು. ಈ ಎಲ್ಲ ಮಾಹಿತಿಗಳನ್ನ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ. ಜೊತೆಗೆ ತನಿಖೆ ಸಮಯದಲ್ಲಿ ಸಿಕ್ಕ ಡಿಜಿಟಲ್ ಫೋರೆನ್ಸಿಕ್ಸ್, ಫೋನ್ ಕರೆ ವಿವರ, ಎಲೆಕ್ಟ್ರಾನಿಕ್ ಸಾಧನಗಳು ಹಾಗೂ ಘಟನಾ ಸ್ಥಳಗಳ ಬಗ್ಗೆ ವಿವರಗಳನ್ನ ದೃಢೀಕರಿಸಲಾಗಿದೆ ಎಂದು ಎನ್ಐಎ ಮೂಲಗಳು ತಿಳಿಸಿವೆ.















