ನವದೆಹಲಿ : ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ 2020-21ನೇ ಸಾಲಿನಿಂದ 2024-25ನೇ ಸಾಲಿನವರೆಗೆ ಚಿತ್ರದುರ್ಗ ಜಿಲ್ಲೆಯಲ್ಲಿ ರೈತರಿಗೆ 559.91 ಕೋಟಿ ರೂ. ವಿಮೆ ಹಣ ದೊರಕಿದೆ. ಜಿಲ್ಲೆಯ 5,81,527 ಲಕ್ಷ ರೈತರು 80 ಕೋಟಿಯಷ್ಟು ರೈತರ ಪಾಲಿನ ವಿಮಾ ಹಣವನ್ನು ಪಾವತಿಸಿದ್ದಾರೆ ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವ ರಾಮನಾಥ್ ಠಾಕೂರ್ ಹೇಳಿದ್ದಾರೆ.
ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆಗೆ ಸಂಬಂಧಿಸಿದಂತೆ 2024-25ನೇ ಸಾಲಿಗೆ ಬೆಳೆ ವಿಮೆ ದಾವೆಗಳ ಕುರಿತು ರೈತರಿಂದ ಯಾವುದೇ ದೂರುಗಳನ್ನು ಸರ್ಕಾರ ಸ್ವೀಕರಿಸಿದೆಯೇ? ಬೆಳೆ ಹಾನಿಯನ್ನು ನಿಖರವಾಗಿ ಅಂದಾಜು ಮಾಡಲು ಸರ್ಕಾರ ಯಾವ ರೀತಿಯಲ್ಲಿ ಕ್ರಮಗಳನ್ನು ಕೈಗೊಳ್ಳುತ್ತಿದೆ? ಕಳೆದ ಐದು ವರ್ಷಗಳಲ್ಲಿ ಕರ್ನಾಟಕದ ರೈತರಿಗೆ ಜಿಲ್ಲಾವಾರು ನೀಡಲಾದ ಬೆಳೆ ವಿಮೆಯ ವಿವರಗಳೇನು? ರೈತರಿಗೆ ಬೆಳೆ ವಿಮಾ ದಾವೆಗಳನ್ನು ಸಮಯಕ್ಕೆ ಸರಿಯಾಗಿ ಹಾಗೂ ಶೀಘ್ರವಾಗಿ ಪಾವತಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳ ವಿವರಗಳೇನು? ಎಂದು ಸಂಸದ ಗೊವಿಂದ ಕಾರಜೋಳ ಸಂಸತ್ ಅಧಿವೇಶನದಲ್ಲಿ ಕೇಂದ್ರ ಸರ್ಕಾರದ ಕೃಷಿ ಸಚಿವರಿಗೆ ಪ್ರಶ್ನೆ ಕೇಳಿದರು.
ಸಂಸದರ ಪ್ರಶ್ನೆಗೆ ಉತ್ತರ ನೀಡಿದ ರಾಮನಾಥ್ ಠಾಕೂರ್, ಚಿತ್ರದುರ್ಗ ಜಿಲ್ಲೆಯಲ್ಲಿ 2,48,212 ಲಕ್ಷ ರೈತರಿಗೆ 559.91 ಕೋಟಿ ರೂ. ವಿಮಾ ಹಣ ದೊರಕಿದೆ. ಅದೇ ರೀತಿ ರಾಜ್ಯದಲ್ಲಿ 1,29,95,086 ಕೋಟಿ ರೈತರು ವಿಮೆಗೆ ನೊಂದಣಿ ಮಾಡಿಸಿಕೊಂಡಿದ್ದು, 1,584 ಕೋಟಿ ವಿಮೆ ಪ್ರೀಮಿಯಮ್ ಪಾವತಿಸಿರುತ್ತಾರೆ. ರಾಜ್ಯದ ರೈತರಿಗೆ 10,000 ಕೋಟಿಯಷ್ಟು ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆಯ ವಿಮೆ ಪರಿಹಾರ ಸಿಕ್ಕಿದೆ ಎಂದು ತಿಳಿಸಿದ್ದಾರೆ.
ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆಯ ಕಾರ್ಯಾಚರಕಾ ಮಾರ್ಗಸೂಚಿಗಳ ಪ್ರಕಾರ, ಸಂಬಂಧಿಸಿದ ರಾಜ್ಯ ಸರ್ಕಾರದಿಂದ ಅಗತ್ಯವಾದ ಉತ್ಪಾದನಾ ಮಾಹಿತಿಯನ್ನು ಸ್ವೀಕರಿಸಿದ ದಿನದಿಂದ 21 ದಿನಗಳ ಒಳಗಾಗಿ ಬಹುತೇಕ ದಾವೆಗಳನ್ನು ವಿಮಾ ಕಂಪನಿಗಳು ಪರಿಹರಿಸುತ್ತವೆ. ಆದರೆ, ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆ ಜಾರಿಗೆ ಬಂದ ನಂತರದ ಅವಧಿಯಲ್ಲಿ ಕೆಲವು ಸಂದರ್ಭಗಳಲ್ಲಿ ದಾವೆಗಳ ಪಾವತಿಗೆ ಸಂಬಂಧಿಸಿದಂತೆ ದೂರುಗಳು ಬಂದಿವೆ ಎಂದರು.
ರಾಜ್ಯ ಸರ್ಕಾರದ ಸಬ್ಸಿಡಿ ಪಾಲು ಬಿಡುಗಡೆಯಲ್ಲಿ ವಿಳಂಬ, ಬ್ಯಾಂಕುಗಳಿಂದ ವಿಮಾ ಪ್ರಸ್ತಾವನೆಗಳನ್ನು ತಪ್ಪಾಗಿ ಅಥವಾ ತಡವಾಗಿ ಸಲ್ಲಿಸಿದ ಕಾರಣ ದಾವೆಗಳ ಪಾವತಿಯಲ್ಲಿ ವಿಳಂಬ ಅಥವಾ ಕಡಿಮೆ ಪಾವತಿ ಹಾಗೂ ಉತ್ಪಾದನಾ ಮಾಹಿತಿಯಲ್ಲಿನ ವ್ಯತ್ಯಾಸ ಮತ್ತು ಅದರಿಂದ ಉಂಟಾದ ರಾಜ್ಯ ಸರ್ಕಾರ ಹಾಗೂ ವಿಮಾ ಕಂಪನಿಗಳ ನಡುವಿನ ವಿವಾದಗಳು ವಿಳಂಬಕ್ಕೆ ಕಾರಣವಾಗಿವೆ ಎಂದು ಹೇಳಿದರು.
ವಿಮಾ ಕಂಪನಿಗಳು ನಿಗಧಿತ ಅವಧಿಯೊಳಗೆ ಪಾವತಿ ಮಾಡದಿದ್ದಲ್ಲಿ 12%ನಷ್ಟು ದಂಡವನ್ನು ಸ್ವಯಂಚಾಲಿತವಾಗಿ ಲೆಕ್ಕಹಾಕಿ ಮುಂಗಾರು 2024ರಿಂದ ರಾಷ್ಟ್ರೀಯ ಬೆಳೆ ವಿಮೆ ಪೋರ್ಟಲ್ ಮೂಲಕ ದಂಡ ವಿಧಿಸಲಾಗುತ್ತದೆ. ಇದೇ ರೀತಿಯಲ್ಲಿ ರಾಜ್ಯ ಸರ್ಕಾರವೂ ತನ್ನ ಪ್ರೀಮಿಯಮ್ ಸಬ್ಸಿಡಿಯನ್ನು ನಿಗದಿತ ಅವಧಿಯಲ್ಲಿ ಬಿಡುಗಡೆ ಮಾಡದೇ ವಿಳಂಬ ಮಾಡಿದಲ್ಲಿ ರಾಜ್ಯ ಸರ್ಕಾರಕ್ಕೂ ಸಹ 12%ನಷ್ಟು ದಂಡವನ್ನು ಹಾಕುವ ವ್ಯವಸ್ಥೆ ಈ ಯೋಜನೆಯಲ್ಲಿ ಇದೆ ಎಂದು ಸಚಿವರು ತಿಳಿಸಿದ್ದಾರೆ.
ರಾಜ್ಯ ಸರ್ಕಾರಗಳು, ಜಾರಿಗೆ ತರುವ ವಿಮಾ ಕಂಪನಿಗಳು, ಹಣಕಾಸು ಸಂಸ್ಥೆಗಳು ಮತ್ತು ಸಾಮಾನ್ಯ ಸೇವಾ ಕೇಂದ್ರಗಳ ಜಾಲದ ಮೂಲಕ ರೈತರು ಹಾಗೂ ಪಂಚಾಯತ್ ರಾಜ್ ಸಂಸ್ಥೆಗಳ ಸದಸ್ಯರಿಗೆ ಈ ಯೋಜನೆಯ ಪ್ರಮುಖ ಅಂಶಗಳ ಬಗ್ಗೆ ಅರಿವು ಮೂಡಿಸಲು ನಡೆಸುತ್ತಿರುವ ಜಾಗೃತಿ ಚಟುವಟಿಕೆಗಳಿಗೆ ಕೇಂದ್ರ ಸರ್ಕಾರ ಸಕ್ರಿಯ ಬೆಂಬಲ ನೀಡಿದೆ. ಬೆಳೆ ವಿಮಾ ವಾರ/ಫಸಲ್ ಭಿಮಾ ಸಪ್ತಾಹ ಎಂಬ ಸಂರಚಿತ ಜಾಗೃತಿ ಅಭಿಯಾನವನ್ನು ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು ಮುಂಗಾರು 2021ರಿಂದ ಆರಂಭಿಸಿದೆ.
ಇದರ ಜೊತೆಗೆ ಯೋಜನೆಯ ಜಾರಿಗೆ ಸಂಬಂಧಿಸಿದ ವಿವಿಧ ಅಂಶಗಳ ಬಗ್ಗೆ ರೈತರ ಜ್ಞಾನವರ್ಧನೆಗಾಗಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಫಸಲ್ ಭಿಮಾ ಪಾಠಶಾಲೆಗಳನ್ನು ಆಯೋಜಿಸಲಾಗುತ್ತಿದೆ. ಈ ಯೋಜನೆಯಡಿ ನೋಂದಾಯಿತ ರೈತರಿಗೆ ಗ್ರಾಮ ಪಂಚಾಯತ್ ಮಟ್ಟದಲ್ಲಿ ವಿಶೇಷ ಶಿಬಿರಗಳ ಮೂಲಕ ಬೆಳೆ ವಿಮೆ ಪಾಲಿಸಿಯ ಮುದ್ರಿತ ಪ್ರತಿಗಳನ್ನು ವಿತರಿಸಲಾಗುತ್ತಿದೆ ಎಂದು ಸಚಿವರು ಉತ್ತರಿಸಿದ್ದಾರೆ.













