ಮನೆ ರಾಷ್ಟ್ರೀಯ ಪಿಯುಸಿ ಪ್ರಮಾಣ ಪತ್ರ ಇದ್ದರಷ್ಟೇ ಇಂಧನ – ಹಳೆಯ ಕಾರುಗಳಿಗೆ ಪ್ರವೇಶ ನಿಷೇಧ..!

ಪಿಯುಸಿ ಪ್ರಮಾಣ ಪತ್ರ ಇದ್ದರಷ್ಟೇ ಇಂಧನ – ಹಳೆಯ ಕಾರುಗಳಿಗೆ ಪ್ರವೇಶ ನಿಷೇಧ..!

0

ನವದೆಹಲಿ : ರಾಜಧಾನಿ ದೆಹಲಿ ಉಸಿರುಗಟ್ಟುತ್ತಿದೆ. ಪ್ರತಿ ಚಳಿಗಾಲದಂತೆ ಈ ಬಾರಿಯೂ ವಿಷಗಾಳಿ ದೆಹಲಿಯನ್ನು ಆವರಿಸಿದೆ. ದೆಹಲಿಯ AQI 400ರ ಗಡಿ ದಾಟಿ ಅಪಾಯಕಾರಿ ಮಟ್ಟ ತಲುಪಿದ್ದು 50% ಜನರಿಗೆ ವರ್ಕ್‌ ಫ್ರಂ ಹೋಮ್‌ ಮಾಡಲು ಸರ್ಕಾರ ಸೂಚಿಸಿದೆ. ಅಲ್ಲದೇ ಇಂದಿನಿಂದ ಇನ್ನಷ್ಟು ಕಠಿಣ ನಿಯಮಗಳನ್ನ ಅನುಷ್ಠಾನಗೊಳಿಸುತ್ತಿದೆ.

ದೆಹಲಿ ಸರ್ಕಾರ ಜಾರಿಗೊಳಿಸಿರುವ ಕಠಿಣ ಮಾಲಿನ್ಯ ನಿಯಂತ್ರಣ ಕ್ರಮಗಳ ಭಾಗವಾಗಿ ಬಿಎಸ್‌-VI ಎಂಜಿನ್‌ ಹೊಂದಿರದ ಹಳೆಯ ಕಾರುಗಳಿಗೆ ದೆಹಲಿ ಪ್ರವೇಶವನ್ನ ನಿಷೇಧಿಸಲಾಗಿದೆ. ಇದರೊಂದಿಗೆ ಪಿಯುಸಿ ಪ್ರಮಾಣ ಪತ್ರ ಹಾಗೂ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರವಿಲ್ಲದ ವಾಹನಗಳಿಗೆ ಇಂಧನ ನಿಷೇಧಿಸಲಾಗಿದೆ.

ದಟ್ಟ ಮಂಜು, ಕಡಿಮೆ ಗೋಚರತೆಯಿಂದಾಗಿ ಇಂದಿನಿಂದ ಕಠಿಣ ಕ್ರಮ ಅನುಷ್ಠಾನಕ್ಕೆ ಜಾರಿಗೊಳಿಸಿರುವ ರಾಜ್ಯ ಸರ್ಕಾರ ಬಿಎಸ್‌-6 (ಭಾರತ್ ಸ್ಟೇಜ್–6) ವಾಹನಗಳಿಗೆ ಮಾತ್ರ ರಾಷ್ಟ್ರ ರಾಜಧಾನಿ ಪ್ರವೇಶಕ್ಕೆ ಅನುಮತಿಸಲಾಗಿದೆ. ಇದು ದೆಹಲಿ ಸಮೀಪದ ಗುರುಗ್ರಾಮ್, ಗಾಜಿಯಾಬಾದ್, ಫರಿದಾಬಾದ್ ಮತ್ತು ನೋಯ್ಡಾದಿಂದ ದೆಹಲಿಗೆ ಪ್ರವೇಶಿಸುವ 12 ಲಕ್ಷ ವಾಹನಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ.

ಏಕೆಂದರೆ ಬಿಎಸ್‌-6 ಎಂಜಿನ್‌ ಹೊಂದಿರದ ವಾಹನಗಳು ಈ ಭಾಗಗಳಲ್ಲಿ ಹೆಚ್ಚಾಗಿವೆ. ಹೀಗಾಗಿ ನೋಯ್ಡಾದಿಂದ 4 ಲಕ್ಷಕ್ಕೂ ಹೆಚ್ಚು, ಗುರಗಾಂವ್‌ನಿಂದ 2 ಲಕ್ಷ ಮತ್ತು ಗಾಜಿಯಾಬಾದ್‌ನಿಂದ 5.5 ಲಕ್ಷ ವಾಹನಗಳನ್ನು ರಾಷ್ಟ್ರ ರಾಜಧಾನಿಗೆ ಪ್ರವೇಶಿಸುವುದನ್ನ ನಿಷೇಧಿಸಲಾಗಿದೆ.

ದೆಹಲಿ ಪ್ರವೇಶಿಸುವ ವಾಹನಗಳ ತಪಾಸಣೆಗಾಗಿ 580 ಪೊಲೀಸ್ ಸಿಬ್ಬಂದಿಯನ್ನ ನಿಯೋಜನೆ ಮಾಡಲಾಗಿದೆ. 126 ಚೆಕ್‌ಪೋಸ್ಟ್‌ಗಳಲ್ಲಿ ಸುಮಾರು 37 ಸ್ಪೀಡ್‌ ಚೆಕ್‌ ವಾಹನಗಳನ್ನೂ ನಿಯೋಜಿಸಲಾಗಿದೆ. ಸಾರಿಗೆ ಇಲಾಖೆ, ಮುನ್ಸಿಪಲ್ ಕಾರ್ಪೊರೇಷನ್ ಮತ್ತು ಆಹಾರ ಇಲಾಖೆಯ ಸಿಬ್ಬಂದಿಗಳನ್ನ ಪೆಟ್ರೋಲ್ ಪಂಪ್‌ಗಳಲ್ಲಿ ನಿಯೋಜಿಸಿದ್ದು, ಮಾಲಿನ್ಯ ಹೊಸಸೂಸುವಿಕೆಯ ಮೇಕೆ ತೀವ್ರ ನಿಗಾ ವಹಿಸಲಾಗಿದೆ.

ಈಗಾಗಲೇ ದೆಹಲಿಯ ಪೆಟ್ರೋಲ್ ಪಂಪ್‌ಗಳಲ್ಲಿ ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವಿಕೆ ಕ್ಯಾಮೆರಾಗಳನ್ನ ಅಳವಡಿಸಲಾಗಿದೆ. ಈ ತಂತ್ರಜ್ಞಾನವು ಮಾನ್ಯತೆಯಿರುವ ಪಿಯುಸಿ ಪ್ರಮಾಣ ಪತ್ರಗಳನ್ನು ಗುರುತಿಸೋದಕ್ಕೂ ಸಹಾಯ ಮಾಡಲಿದೆ ಎಂದು ತಿಳಿದುಬಂದಿದೆ.