ಮುಂಬೈ (Mumbai): ʻನನ್ನ ಜನರೇ ನನಗೆ ದ್ರೋಹ ಬಗೆದರು’ ಎಂದು ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಸಂಪುಟ ಸಹೋದ್ಯೋಗಿಗಳ ಎದುರು ಹೇಳಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಠಾಕ್ರೆ ಅವರು ರಾಜೀನಾಮೆಗೂ ಮುನ್ನ ಸಂಪುಟ ಸಭೆ ನಡೆಸಿ ವಿದಾಯ ಭಾಷಣ ಮಾಡಿದ್ದರು. ಈ ವೇಳೆ ಈ ಮೇಲಿನಂತೆ ಹೇಳಿಕೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ʻಉದ್ದೇಶವಿಲ್ಲದೇ ಯಾರಿಗಾದರೂ ನೋವುಂಟು ಮಾಡಿದ್ದರೆ ನನ್ನನ್ನು ಕ್ಷಮಿಸಿ’ ಎಂದು ಸಹೋದ್ಯೋಗಿಗಳಲ್ಲಿ ಕೇಳಿಕೊಂಡರು ಎಂದು ಮೂಲಗಳು ತಿಳಿಸಿವೆ. ಎರಡೂವರೆ ವರ್ಷಗಳ ಕಾಲ ಸಹಕಾರ ನೀಡಿದ ಸಂಪುಟ ಸದಸ್ಯರಿಗೆಠಾಕ್ರೆ ಧನ್ಯವಾದ ಹೇಳಿದ್ದಾರೆ.
ಶಿವಸೇನಾ ಹಿರಿಯ ನಾಯಕ ಏಕನಾಥ ಶಿಂಧೆ ಬಂಡಾಯದ ಹಿನ್ನೆಲೆಯಲ್ಲಿ ಹಾಗೂ ಬಹುಮತ ಸಾಬೀತುಪಡಿಸುವಂತೆ ಮಹಾ ವಿಕಾಸ್ ಆಘಾಡಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದ ಬೆನ್ನಲ್ಲೇ ಠಾಕ್ರೆ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಇನ್ನು ಗೋವಾದ ಪಣಜಿಯಲ್ಲಿ ವಾಸ್ತವ್ಯ ಹೂಡಿರುವ ಮಹಾರಾಷ್ಟ್ರ ಶಿವಸೇನೆ ಬಂಡಾಯ ನಾಯಕ ಏಕನಾಥ ಶಿಂದೆ ಹಾಗೂ ಉಳಿದ ಇತರ ಬಂಡಾಯ ಶಾಸಕರು ಇಂದು ಮುಂಬೈಗೆ ಮರಳಲಿದ್ದಾರೆಂದು ಹೇಳಲಾಗುತ್ತಿದೆ. ಇಂದು ವಿಶ್ವಾಸಮತಯಾಚನೆಗೆ ಸುಪ್ರಿಂಕೋರ್ಟ್ ಸೂಚಿಸಿರುವ ಹಿನ್ನೆಲೆಯಲ್ಲಿ ಬಂಡಾಯ ಶಾಸಕರು ಇಂದು ಮುಂಬೈಗೆ ಮರಳುವ ನಿರೀಕ್ಷೆಯಿದೆ.














