ನವದೆಹಲಿ : ಉತ್ತರ ಭಾರತದಾದ್ಯಂತ ಶೀತ ಗಾಳಿ ಅಬ್ಬರ ಜೋರಾಗಿದೆ. ಮಂಜು ಕವಿದ ವಾತಾವರಣ, ಹೊಗೆಯಿಂದಾಗಿ ದೆಹಲಿ ವಿಮಾನ ನಿಲ್ದಾಣದಲ್ಲಿ 100 ಮೀ ಮಾತ್ರ ಗೋಚರತೆಯಿದ್ದು, 270 ವಿಮಾನಗಳು ವಿಳಂಬವಾಗಿದ್ದು, 10 ವಿಮಾನಗಳು ರದ್ದಾಗಿವೆ.
ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಮಂಗಳವಾರ (ಡಿ.23) ಬೆಳಿಗ್ಗೆ ಪ್ರಯಾಣಿಕರಿಗೆ ಸಲಹೆಯನ್ನು ನೀಡಿದ್ದು, ಈ ಪ್ರದೇಶದಲ್ಲಿ ದಟ್ಟವಾದ ಮಂಜು ಮತ್ತು ಕಡಿಮೆ ಗೋಚರತೆಯಿರುವ ಹಿನ್ನೆಲೆ ವಿಮಾನಗಳು ವಿಳಂಬವಾಗಲಿದ್ದು, ಕೆಲವು ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದೆ.
ವಿಮಾನ ನಿಲ್ದಾಣದ ರನ್‌ವೇಗಳಲ್ಲಿ ಬೆಳಗಿನ ಜಾವ ಗೋಚರತೆ 100 ಮೀಟರ್‌ಗಿಂತ ಕಡಿಮೆಯಿರುವ ಕಾರಣ ಈ ಕ್ರಮಕೈಗೊಳ್ಳಲಾಗಿದೆ. ಮಂಜಿನಿಂದಾಗಿ ವಿಮಾನ ಮಾತ್ರವಲ್ಲದೇ ರಸ್ತೆ, ರೈಲು ಸಂಚಾರದಲ್ಲಿ ಅಡಚಡೆ ಉಂಟಾಗಿದೆ.
ದೆಹಲಿಯಲ್ಲಿ ಮಾತ್ರವಲ್ಲದೇ, ದಟ್ಟವಾದ ಮಂಜಿನಿಂದಾಗಿ ಪಾಟ್ನಾ, ಅಮೃತಸರ, ಚಂಡೀಗಢ, ಜಮ್ಮು, ಲಕ್ನೋ, ವಾರಣಾಸಿ, ಪಾಟ್ನಾ, ರಾಂಚಿ ಮತ್ತು ಹಿಂಡನ್‌ನಲ್ಲಿ ವಿಮಾನ ವಿಳಂಬವಾಗಿದೆ. ಗೋಚರತೆ ಕಡಿಮೆಯಾಗುವುದರಿಂದ ಆಗಮನ ಮತ್ತು ನಿರ್ಗಮನದ ಮೇಲೆ ಪರಿಣಾಮ ಬೀರಬಹುದು ಎಂದು ಏರ್ ಇಂಡಿಯಾ, ಇಂಡಿಗೋ ಮತ್ತು ಸ್ಪೈಸ್‌ಜೆಟ್ ತಿಳಿಸಿವೆ.
ಮನಾಲಿ ಹಾಗೂ ಗ್ಯಾಂಗ್ಟಕ್‌ನಲ್ಲಿ ಶೀತ ಗಾಳಿಯ ಪರಿಣಾಮ ತೀವ್ರವಾಗಿದ್ದು, ಮನಾಲಿಯಲ್ಲಿ 1, ಗ್ಯಾಂಗ್ಟಕ್‌ನಲ್ಲಿ 5 ಡಿಗ್ರಿಗೆ ತಾಪಮಾನ ಇಳಿಕೆಯಾಗಿದೆ. ರಾತ್ರಿ ವೇಳೆ ತಾಪಮಾನದಲ್ಲಿ ತೀವ್ರ ಇಳಿಕೆಯಾಗಲಿದೆ. ಈ ಸಂಬಂಧ ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ತಿಳಿಸಿದೆ.














