ಮನೆ ರಾಜ್ಯ ʻಭ್ರಷ್ಟಾಚಾರ ನಿಗ್ರಹ ದಳವೇ ಭ್ರಷ್ಟವೇ ಕೂಪವಾಗಿದೆʼ: ಕಿಡಿಕಾರಿದ ಹೈಕೋರ್ಟ್‌

ʻಭ್ರಷ್ಟಾಚಾರ ನಿಗ್ರಹ ದಳವೇ ಭ್ರಷ್ಟವೇ ಕೂಪವಾಗಿದೆʼ: ಕಿಡಿಕಾರಿದ ಹೈಕೋರ್ಟ್‌

0

ಬೆಂಗಳೂರು (Bengaluru): ʻಭ್ರಷ್ಟಾಚಾರ ನಿಗ್ರಹ ದಳವೇ ಅತಿದೊಡ್ಡ ಭ್ರಷ್ಟರ ಕೂಪವಾಗಿದೆʼ ಎಂದು ಕರ್ನಾಟಕ ಹೈಕೋರ್ಟ್‌ ಕಿಡಿಕಾರಿದೆ.

ಲಂಚ ಪ್ರಕರಣದಲ್ಲಿ ಆರೋಪಿಯಾಗಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯ ಉಪ ತಹಸೀಲ್ದಾರ್‌ ಪಿ.ಎಸ್‌.ಮಹೇಶ್‌ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿ ಎಚ್‌.ಪಿ.ಸಂದೇಶ್‌ ಅವರು ಎಸಿಬಿ ವಿರುದ್ಧ ಹರಿಹಾಯ್ದಿದ್ದಾರೆ.

ಎಸಿಬಿಯ ಮುಖ್ಯಸ್ಥ ಎಡಿಜಿಪಿಯೇ ಕಳಂಕಿತ ಅಧಿಕಾರಿ. ಎಸಿಬಿ ಕಚೇರಿಗಳೆಲ್ಲವೂ ಕಲೆಕ್ಷನ್‌ ಸೆಂಟರ್‌ಗಳಾಗಿವೆ. ದೊಡ್ಡ ದೊಡ್ಡ ಐಎಎಸ್‌, ಐಪಿಎಸ್‌ ಅಧಿಕಾರಿಗಳನ್ನು ಬಿಟ್ಟು ಬಾಲಂಗೋಚಿಗಳನ್ನು ಹಿಡಿದುಕೊಂಡು ಬರುತ್ತೀರಿ ಎಂದು ಎಸಿಬಿ ಕಾರ್ಯವೈಖರಿ ವಿರುದ್ಧ ಹೈಕೋರ್ಟ್‌ ಕಿಡಿ ಕಾರಿದೆ.

ಅರ್ಜಿದಾರರ ಪರ ವಕೀಲ ಎ.ಎಸ್‌.ಪೊನ್ನಣ್ಣ ಅವರು ಪ್ರಕರಣದ ವಿವರಣೆ ನೀಡಲು ಮುಂದಾದರು. ಆಗ ಎಸಿಬಿ ಪರ ವಕೀಲ ಪಿ.ಎನ್‌.ಮನಮೋಹನ್‌, ಈ ಪ್ರಕರಣದಲ್ಲಿ ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಅವರನ್ನೂ ಆರೋಪಿಯನ್ನಾಗಿ ಮಾಡಲಾಗಿದೆ. ಪ್ರಕರಣ ರದ್ದು ಕೋರಿದ್ದ ಜಿಲ್ಲಾಧಿಕಾರಿ ಮಂಜುನಾಥ್‌ ಸಲ್ಲಿಸಿದ್ದ ಅರ್ಜಿಯಲ್ಲಿ ಹೈಕೋರ್ಟ್‌ ಮಧ್ಯಂತರ ಆದೇಶ ನೀಡಲು ನಿರಾಕರಿಸಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಆಗ ಸಿಟ್ಟಾದ ನ್ಯಾಯಮೂರ್ತಿಗಳು, ಎಸಿಬಿಯೇ ಭ್ರಷ್ಟಾಚಾರದ ದಂಧೆ ನಡೆಸುತ್ತಿದೆ. ಎಸಿಬಿ ಎಡಿಜಿಪಿಯೇ ಕಳಂಕಿತ ಅಧಿಕಾರಿಯಾಗಿದ್ದಾರೆ. ಅವರ ಮೇಲೆಯೇ ಆರೋಪಗಳಿವೆ. ಹೀಗಿರುವಾಗ ಎಸಿಬಿಯಿಂದ ಪ್ರಾಮಾಣಿಕ ಕೆಲಸ ಸಾಧ್ಯವೇ? ಸರ್ಕಾರ ಉದ್ದೇಶಪೂರ್ವಕವಾಗಿ ಕಳಂಕಿತರನ್ನು ಅಲ್ಲಿಗೆ ಹಾಕುತ್ತಿದೆ ಎಂದರು.

ಅಲ್ಲದೆ, ಸಮಾಜಕ್ಕೆ ಅಂಟಿರುವ ಭ್ರಷ್ಟಾಚಾರದ ಈ ಕ್ಯಾನ್ಸರ್‌ನಲ್ಲಿ ಮೇಲ್ಮಟ್ಟದ ಅಧಿಕಾರಿಗಳನ್ನು ಆರೋಪಿಗಳನ್ನಾಗಿ ಮಾಡದೇ ಕೆಳ ಹಂತದ ಅಧಿಕಾರಿಗಳನ್ನು ಮಾತ್ರ ಆರೋಪಿಗಳನ್ನಾಗಿ ಮಾಡಲಾಗುತ್ತಿದೆ. ಇದು ಅಧಿಕಾರಶಾಹಿಗಳ ವ್ಯವಸ್ಥೆ ಎಂದು ತರಾಟೆಗೆ ತೆಗೆದುಕೊಂಡರು. ಯಾವ ಯಾವ ಪ್ರಕರಣಗಳಲ್ಲಿ ಎಷ್ಟು ಜನ ಹಿರಿಯ ಅಧಿಕಾರಿಗಳ ವಿರುದ್ಧ ‘ಬಿ’ ರಿಪೋರ್ಟ್‌ ಸಲ್ಲಿಸಿದ್ದೀರಿ ಮತ್ತು 2016ರಿಂದ ಈವರೆಗೆ ‘ಬಿ’ ರಿಪೋರ್ಟ್‌ ಹಾಕಿರುವ ಪ್ರಕರಣಗಳೆಷ್ಟು? ಎಂಬ ಬಗ್ಗೆ ಸಮಗ್ರ ವರದಿ ಸಲ್ಲಿಸಿ ಎಂದು ಎಸಿಬಿ ವಕೀಲರಿಗೆ ನಿರ್ದೇಶಿಸಿದ ನ್ಯಾಯಮೂರ್ತಿಗಳು ವಿಚಾರಣೆಯನ್ನು ಜುಲೈ 3ಕ್ಕೆ ಮುಂದೂಡಿದರು.

ಆನೇಕಲ್‌ ತಾಲೂಕಿನ ಕೂಡ್ಲುಗ್ರಾಮದ 38 ಗುಂಟೆ ಭೂಮಿಯ ಒಡೆತನಕ್ಕೆ ಸಂಬಂಧಿಸಿದ ವ್ಯಾಜ್ಯದಲ್ಲಿ ಪೂರಕ ಆದೇಶ ನೀಡಲು ಬೇಗೂರಿನ ಅಜಂ ಪಾಷಾ ಎಂಬುವರಿಂದ 5 ಲಕ್ಷ ರೂ. ಲಂಚ ಪಡೆಯಲಾಗಿದೆ ಎಂಬ ಪ್ರಕರಣದಲ್ಲಿ ಅರ್ಜಿದಾರ ಮಹೇಶ್‌ ಆರೋಪಿಯಾಗಿದ್ದಾರೆ.