ಮನೆ ರಾಷ್ಟ್ರೀಯ ಭಾರೀ ತೂಕದ ಇಂಟರ್‌ನೆಟ್‌ ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದ ಬಾಹುಬಲಿ

ಭಾರೀ ತೂಕದ ಇಂಟರ್‌ನೆಟ್‌ ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದ ಬಾಹುಬಲಿ

0

ಶ್ರೀಹರಿಕೋಟಾ : ಭಾರತದ ‘ಬಾಹುಬಲಿ’ ರಾಕೆಟ್ ಮಾರ್ಕ್-3 ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಅಮೆರಿಕದ ಬ್ಲೂಬರ್ಡ್‌-6 ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ. ಶ್ರೀಹರಿಕೋಟಾ ಉಡ್ಡಯನ ಕೇಂದ್ರದ ಎರಡನೇ ಲಾಂಚ್‌ ಪ್ಯಾಡ್‌ನಿಂದ ಬೆಳಗ್ಗೆ 8:54ಕ್ಕೆ ಮಾರ್ಕ್‌ 3 ರಾಕೆಟ್ 6,500 ಕೆ.ಜಿ ತೂಕದ ಭಾರೀ ಉಪಗ್ರಹವನ್ನು ಹೊತ್ತುಕೊಂಡು ನಭಕ್ಕೆ ಚಿಮ್ಮಿತು.

ಸುಮಾರು 15 ನಿಮಿಷಗಳ ಹಾರಾಟದ ನಂತರ ರಾಕೆಟ್‌ನಿಂದ ಬ್ಲೂಬರ್ಡ್ ಬ್ಲಾಕ್-2 ಬೇರ್ಪಟ್ಟು ಸುಮಾರು 520 ಕಿ.ಮೀ .ಎತ್ತರದಲ್ಲಿ ಅದರ ಉದ್ದೇಶಿತ ಕಕ್ಷೆಯನ್ನು ಯಶಸ್ವಿಯಾಗಿ ತಲುಪಿತು. ಉಪಗ್ರಹ ಉಡಾವಣೆ ಉಶಸ್ವಿಯಾಗಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಇಸ್ರೋವನ್ನು ಅಭಿನಂದಿಸಿದ್ದಾರೆ. LVM3-M6 ಯಶಸ್ವಿಯಾಗಿ ಮತ್ತು ನಿಖರವಾಗಿ ಬ್ಲೂಬರ್ಡ್ ಬ್ಲಾಕ್-2 ಸಂವಹನ ಉಪಗ್ರಹವನ್ನು ಉದ್ದೇಶಿತ ಕಕ್ಷೆಗೆ ಸೇರಿಸಿದೆ ಎಂದು ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿ ಮತ್ತು ಇಸ್ರೋ ಅಧ್ಯಕ್ಷ ಡಾ. ವಿ. ನಾರಾಯಣನ್ ಹೇಳಿದರು.

ಭಾರತದ ನೆಲದಿಂದ ಭಾರತದ ರಾಕೆಟ್‌ ಮೂಲಕ ಉಡಾವಣೆ ಮಾಡಲಾದ ಅತ್ಯಂತ ಭಾರವಾದ ಉಪಗ್ರಹ ಇದಾಗಿರುವುದು ವಿಶೇಷವಾಗಿದೆ. ಇಸ್ರೋದ ವಾಣಿಜ್ಯ ವಿಭಾಗವಾದ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ ಮತ್ತು ಅಮೆರಿಕ ಮೂಲದ AST ಸ್ಪೇಸ್‌ಮೊಬೈಲ್ ಮಧ್ಯೆ ನಡೆದ ವಾಣಿಜ್ಯ ಒಪ್ಪಂದದ ಭಾಗವಾಗಿ ಉಪಗ್ರಹವನ್ನು ಉಡಾವಣೆ ಮಾಡಲಾಗಿತ್ತು. 43.5 ಮೀಟರ್ ಎತ್ತರ ಮತ್ತು 640 ಟನ್ ತೂಕವಿರುವ LVM3 ರಾಕೆಟ್‌ ಅನ್ನು ಬಾಹುಬಲಿ ಎಂದು ಕರೆಯಲಾಗುತ್ತದೆ.

ಉಪಗ್ರಹ ಭಿನ್ನ ಹೇಗೆ? – ಮಸ್ಕ್‌ನ ಸ್ಟಾರ್‌ ಲಿಂಕ್‌ ಅಥವಾ ಒನ್‌ವೆಬ್‌ ಸೇರಿದಂತೆ ಹಲವು ಕಂಪನಿಗಳು ಉಪಗ್ರಹ ಆಧಾರಿತ ಇಂಟರ್‌ನೆಟ್‌ ಸೇವೆಯನ್ನು ನೀಡುತ್ತಿವೆ. ಆದರೆ ಇಲ್ಲಿ ಫೋನಿಗೆ ನೇರವಾಗಿ ಉಪಗ್ರಹದ ಸಂಪರ್ಕ ಇಲ್ಲ. ಮನೆಯಲ್ಲಿರುವ ಆಂಟೇನಾಗೆ ಉಪಗ್ರಹದ ಮೂಲಕ ಸಿಗ್ನಲ್‌ ತಲುಪಿ ನಂತರ ವೈಫೈ ಮೂಲಕ ಫೋನಿಗೆ ಇಂಟರ್‌ನೆಟ್‌ ಸೌಲಭ್ಯ ಪಡೆಯಬಹುದು. ಆದರೆ ಅಮೆರಿಕದ ಎಎಸ್‌ಟಿ ಸ್ಪೇಸ್ ಮೊಬೈಲ್ ತಾನು ತಯಾರಿಸಿದ ಸ್ಮಾರ್ಟ್‌ಫೋನ್‌ಗಳಿಗೆ ನೇರವಾಗಿ ಉಪಗ್ರಹದಿಂದಲೇ ಇಂಟರ್‌ನೆಟ್‌ ಸೌಲಭ್ಯ ಪಡೆಯುವಂತೆ ಈ ಬ್ಲೂಬರ್ಡ್‌-6 ಉಪಗ್ರಹವನ್ನು ಅಭಿವೃದ್ಧಿಪಡಿಸಿದೆ.

ವಿಶ್ವದ ಮೊದಲ ಬಾಹ್ಯಾಕಾಶ ಆಧಾರಿತ ಸೆಲ್ಯುಲಾರ್ ಬ್ರಾಡ್‌ಬ್ಯಾಂಡ್ ನೆಟ್‌ವರ್ಕ್ ನಿರ್ಮಿಸುವ ಭಾಗವಾಗಿ ಈ ಉಪಗ್ರಹ ರೂಪಿಸಿದೆ. ಟೆಕ್ಸಾಸ್ ಮೂಲದ ಕಂಪನಿಯು 2026 ರ ಅಂತ್ಯದ ವೇಳೆಗೆ 45-60 ಉಪಗ್ರಹಗಳನ್ನು ಹಾರಿಸುವ ಗುರಿಯನ್ನು ಹೊಂದಿದೆ. ಬಾಹ್ಯಾಕಾಶದಿಂದಲೇ 5ಜಿ ಬ್ರಾಡ್‌ಬ್ಯಾಂಡ್ ವೇಗದ ಇಂಟರ್‌ನೆಟ್‌ ಸೇವೆ ನೀಡಲು ಉದ್ದೇಶಿಸಿದೆ.

https://youtu.be/aAxQR_C5o4o