ಬೆಂಗಳೂರು : ಸರಸಕ್ಕೆ ಕರೆದು ಟೆಕ್ಕಿ ಬಳಿ ಹಣ ದೋಚಿ ಹಲ್ಲೆ ಮಾಡಿದ ಆರೋಪದ ಮೇಲೆ ಮಹಿಳೆಯರಿಬ್ಬರು ಸೇರಿ ಐವರನ್ನು ಆರ್.ಆರ್ ನಗರ ಪೊಲೀಸರು ಬಂಧಿಸಿದ್ದಾರೆ. ಸುಮಲತಾ@ ಅಂಜಲಿ, ಅನ್ನಪೂರ್ಣೇಶ್ವರಿ ನಗರದ ಹರ್ಷಿಣಿ@ ಸ್ವೀಟಿ, ಜಗದೀಶ್, ಲೋಕೇಶ್ ಮತ್ತು ಮಂಜುನಾಥ್ ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ.
ಇಬ್ಬರು ಮಹಿಳೆಯರು ಸೇರಿಕೊಂಡು ಟೆಕ್ಕಿಯನ್ನು ಸರಸಕ್ಕೆ ಕರೆದಿದ್ದಾರೆ. ಸ್ಥಳಕ್ಕೆ ಬರುತ್ತಿದ್ದಂತೆ 40 ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದಾರೆ. ಟೆಕ್ಕಿ ನಿರಾಕರಿಸುತ್ತಿದ್ದಂತೆ ಸಹಚರರನ್ನು ಕರೆದು ಹಲ್ಲೆ ನಡೆಸಿ, ಮೊಬೈಲ್ ಕಸಿದುಕೊಂಡು ಬೆದರಿಕೆ ಹಾಕಿದ್ದಾರೆ. ಕೂಡಲೇ ಅಲ್ಲಿಂದ ಓಡಿಬಂದ ಟೆಕ್ಕಿ ಸ್ಥಳೀಯರ ಸಹಾಯದಿಂದ 112ಗೆ ಕರೆ ಮಾಡಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಹೋದ ಹೊಯ್ಸಳ ಟೆಕ್ಕಿ ಹಾಗೂ ಹಲ್ಲೆ ಮಾಡಿದ್ದ ಇಬ್ಬರು ಮಹಿಳೆಯರು ಸೇರಿ ಐವರನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ನಡೆಸಿದಾಗ ಗಲಾಟೆ ಹಿಂದಿನ ಕಥೆಯನ್ನು ಬಾಯ್ಬಿಟ್ಟಿದ್ದಾರೆ.
ಡಿ.10ರಂದು ಟೆಲಿಗ್ರಾಂ ಮೂಲಕ ಟೆಕ್ಕಿಗೆ ಓರ್ವ ಹುಡುಗಿಯ ಪರಿಚಯವಾಗಿತ್ತು. ಆ ಹುಡುಗಿ 20,000 ರೂ. ಕೊಡಿ ಎಂದು ಕೇಳಿದ್ದು, ಟೆಕ್ಕಿ ಕೊಡುವುದಾಗಿ ಒಪ್ಪಿಕೊಂಡಿದ್ದರು. ಬಳಿಕ ಟೆಕ್ಕಿ ಮಹಿಳೆ ಮನೆಗೆ ಹೋಗಿದ್ದಾಗ ಬೆದರಿಸಿ, 20 ಸಾವಿರ ರೂ. ಕಸಿದುಕೊಂಡು ಕಳಿಸಿದ್ದರು. ಬಳಿಕ ಅದೇ ಮಹಿಳೆ ತನ್ನ ಸ್ನೇಹಿತೆ ಸಹಾಯದಿಂದ ಅದೇ ಟೆಕ್ಕಿಯನ್ನು ಕರೆಸಿ ಮತ್ತೆ 20 ಸಾವಿರ ರೂ. ಕಸಿದುಕೊಂಡು ಹಲ್ಲೆ ನಡೆಸಿದ್ದರು.
ಈ ಕುರಿತು ಟೆಕ್ಕಿ ಆರ್.ಆರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಟೆಕ್ಕಿಯ ದೂರಿನ ಆಧಾರದ ಮೇಲೆ ಆರ್ ಆರ್ ನಗರ ಪೊಲೀಸರು ಐವರನ್ನು ಬಂಧಿಸಿದ್ದರು. ಸದ್ಯ ಕೋರ್ಟ್ ಐವರಿಗೆ ಜಾಮೀನು ಮಂಜೂರು ಮಾಡಿದೆ ಎಂದು ತಿಳಿದುಬಂದಿದೆ.















