ಬಳ್ಳಾರಿ : ಅರುಣ್ ಯೋಗಿರಾಜ್ ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ತಮ್ಮ ಕಲ್ಪನೆಯಲ್ಲಿ ಕೆತ್ತಿರುವ ವಾಲ್ಮೀಕಿ ಮೂರ್ತಿಯನ್ನು ಬಳ್ಳಾರಿಯಲ್ಲಿ ಜ.3 ರಂದು ಲೋಕಾರ್ಪಣೆ ಆಗಲಿದೆ. ವಾಲ್ಮೀಕಿ ವೃತ್ತದಲ್ಲಿ ಪ್ರತಿಷ್ಠಾಪನೆ ಹಿನ್ನೆಲೆ ಬಳ್ಳಾರಿಗಿಂದು ಆಗಮಿಸಿದ ಮೂರ್ತಿಯನ್ನು ಭವ್ಯ ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು. ಶಾಸಕ ಭರತ್ ರೆಡ್ಡಿ ವೈಯಕ್ತಿಕವಾಗಿ 1.10 ಕೋಟಿ ವೆಚ್ಚದಲ್ಲಿ ಮೂರ್ತಿಯನ್ನು ನಿರ್ಮಾಣ ಮಾಡಿಸಿದ್ದಾರೆ.
ಶಿಲ್ಪಿ ಅರುಣ್ ಯೋಗಿರಾಜ್ ಕಲ್ಪನೆಯಲ್ಲಿ ವಾಲ್ಮೀಕಿ ಮೂರ್ತಿಯನ್ನು ಅದ್ಭುತವಾಗಿ ಕೆತ್ತನೆ ಮಾಡಲಾಗಿದೆ. ಬಳ್ಳಾರಿಗೆ ಬಂದಿರುವ ಮೂರ್ತಿಯನ್ನು ವಾಲ್ಮೀಕಿ ಸಮಾಜದ ಮುಖಂಡರು, ಯುವಕರು ಹಾಗೂ ಮಹಿಳೆಯರು ಪೂರ್ಣಕುಂಭದೊಂದಿಗೆ ಸ್ವಾಗತಿಸಿದರು. ರಾಮ-ಆಂಜನೇಯ ವೇಷಭೂಷಣ ಹಾಕಿದ ಕೆಲ ಯುವಕರು ಮೆರವಣಿಗೆಯೂದ್ದಕ್ಕೂ ಗಮನ ಸೆಳೆದರು. ಡೊಳ್ಳು ಕುಣಿತ, ವಾದ್ಯಮೇಳಗಳು, ಜನಪದ ಕಲಾವಿದರ ಪ್ರದರ್ಶನಗಳು ಮೆರವಣಿಗೆಗೆ ವಿಶೇಷ ಮೆರುಗು ನೀಡಿದವು.
ವಾಲ್ಮೀಕಿ ಮಹರ್ಷಿಯ ಭಾವಚಿತ್ರಗಳು, ಬ್ಯಾನರ್ಗಳು ಮತ್ತು ಘೋಷಣೆಗಳೊಂದಿಗೆ ಸಾಗಿದ ಮೆರವಣಿಗೆ ನಗರದೆಲ್ಲೆಡೆ ಗಮನ ಸೆಳೆಯಿತು. ಮೂರ್ತಿ ಉದ್ಘಾಟನೆಗೆ ಸಚಿವ ಸತೀಶ್ ಜಾರಕಿಹೊಳಿ ಸೇರಿದಂತೆ ವಾಲ್ಮೀಕಿ ಸಮಾಜದ ಎಲ್ಲಾ ಶಾಸಕರು ಭಾಗವಹಿಸಲಿದ್ದಾರೆ ಎಂದು ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.














