ನವದೆಹಲಿ : ಸಾಮಾಜಿಕ ಮಾಧ್ಯಮಗಳ ಬಳಕೆಗೆ ಸಂಬಂಧಿಸಿದಂತೆ ಸೇನೆ ಹೊಸ ನೀತಿಯನ್ನು ಬಿಡುಗಡೆ ಮಾಡಿದೆ. ಈ ನೀತಿಯನ್ವಯ ಸೈನಿಕರು ಸಾಮಾಜಿಕ ಜಾಲತಾಣಗಳನ್ನು ವೀಕ್ಷಿಸಬಹುದು. ಆದರೆ ಯಾವುದೇ ಲೈಕ್ ಮತ್ತು ಕಮೆಂಟ್ ಮಾಡುವಂತಿಲ್ಲ ಎಂದು ಸೂಚಿಸಲಾಗಿದೆ. ಸಾಮಾಜಿಕ ಮಾಧ್ಯಮಗಳ ಬಳಕೆಗೆ ಸಂಬಂಧಿಸಿದಂತೆ ಸೇನೆ ತನ್ನ ನೀತಿಯಲ್ಲಿ ಗಮನಾರ್ಹ ಬದಲಾವಣೆ ಮಾಡಿದೆ. ಸೈನಿಕರು ಸ್ವಯಂ ಜಾಗೃತಿ ಮತ್ತು ಮಾಹಿತಿ ಸಂಗ್ರಹಣೆ ಉದ್ದೇಶದಿಂದ ಸಾಮಾಜಿಕ ಮಾಧ್ಯಮದಲ್ಲಿರುವ ವಿಷಯವನ್ನು ವೀಕ್ಷಿಸಲು ಮತ್ತು ಮೇಲ್ವಿಚಾರಣೆ ಮಾಡಲು ಅವಕಾಶ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ನಕಲಿ ಅಥವಾ ದಾರಿತಪ್ಪಿಸುವ ಪೋಸ್ಟ್‌ಗಳು ಕಂಡು ಬಂದಲ್ಲಿ ಅದನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಬೇಕು ಮತ್ತು ಫ್ಲ್ಯಾಗ್ ಮಾಡಲು ಸೂಚಿಸಲಾಗಿದೆ. ಭದ್ರತಾ ಕಾರಣಗಳಿಗಾಗಿ ಈ ಹಿಂದೆ ಸೇನೆ ಫೇಸ್‌ಬುಕ್, ಎಕ್ಸ್ ಮತ್ತು ಇನ್‌ಸ್ಟಾಗ್ರಾಮ್‌ನಂತಹ ಸಾಮಾಜಿಕ ಮಾಧ್ಯಮ ಬಳಕೆಯ ಮೇಲೆ ನಿರ್ಬಂಧಗಳನ್ನು ವಿಧಿಸಲಾಗಿತ್ತು. ವಿದೇಶಿ ಏಜೆನ್ಸಿಗಳ ಹನಿಟ್ರ್ಯಾಪ್‌ಗೆ ಬಲಿಯಾಗುವುದು ಮತ್ತು ಸೂಕ್ಷ್ಮ ಮಾಹಿತಿಯ ಸೋರಿಕೆಗೆ ಕಾರಣವಾಗುತ್ತಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಬಳಕೆಗೆ ಕಠಿಣ ನಿಯಮಗಳನ್ನು ಜಾರಿಗೆ ತಂದಿತ್ತು.
2019 ರವರೆಗೆ ಸೇನಾ ಸಿಬ್ಬಂದಿಗೆ ಯಾವುದೇ ಸಾಮಾಜಿಕ ಮಾಧ್ಯಮ ಸೇರಲು ಅವಕಾಶವಿರಲಿಲ್ಲ. ಸಾಮಾಜಿಕ ಮಾಧ್ಯಮ ದುರುಪಯೋಗದ ಹಲವಾರು ಪ್ರಕರಣಗಳ ನಂತರ ಸೇನೆಯು 2020 ರಲ್ಲಿ ನಿಯಮಗಳನ್ನು ಬಿಗಿಗೊಳಿಸಿತ್ತು ಮತ್ತು ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಸೇರಿದಂತೆ 89 ಮೊಬೈಲ್ ಅಪ್ಲಿಕೇಶನ್‌ಗಳನ್ನು ಡಿಲೀಟ್ ಮಾಡುವಂತೆ ಸೈನಿಕರಿಗೆ ಸೂಚಿಸಿತ್ತು.
ಕಟ್ಟುನಿಟ್ಟಾದ ನಿಯಮಗಳ ಹೊರತಾಗಿಯೂ ಸೇನೆ ಈಗ ಫೇಸ್‌ಬುಕ್, ಯೂಟ್ಯೂಬ್, ಎಕ್ಸ್, ಲಿಂಕ್ಡ್‌ಇನ್, ಕೋರಾ, ಟೆಲಿಗ್ರಾಮ್ ಮತ್ತು ವಾಟ್ಸಾಪ್‌ನಂತಹ ಕೆಲವು ಪ್ಲಾಟ್‌ಫಾರ್ಮ್‌ಗಳ ಬಳಕೆಯನ್ನು ಅನುಮತಿಸಿದೆ. ಹೀಗಿದ್ದರೂ ಎಲ್ಲಾ ಭದ್ರತಾ ಶಿಷ್ಟಾಚಾರಗಳನ್ನು ಪಾಲಿಸುವುದು ಕಡ್ಡಾಯವಾಗಿದ್ದು ಯಾವುದೇ ಸೂಚನೆಯನ್ನು ಉಲ್ಲಂಘಿಸುವಂತಿಲ್ಲ ಎಂದು ತಿಳಿಸಿದೆ.














