ನವದೆಹಲಿ : ರಾಜ್ಯ ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಬದಲಾವಣೆ ಗೊಂದಲಗಳು ಮುಂದುವರಿದಿರುವ ಬೆನ್ನಲ್ಲೇ ಇಂದು ಸಿಎಂ ಸಿದ್ದರಾಮಯ್ಯ ದೆಹಲಿಗೆ ತೆರಳಲಿದ್ದಾರೆ. ನಾಳೆ ನಡೆಯಲಿರುವ ಕಾಂಗ್ರೆಸ್ ಕಾರ್ಯಕಾರಣಿಯಲ್ಲಿ ಸಿದ್ದರಾಮಯ್ಯ ಭಾಗಿಯಾಗಲಿದ್ದು, ಇದೇ ವೇಳೆ ಹೈಕಮಾಂಡ್ ನಾಯಕರನ್ನು ಪ್ರತ್ಯೇಕವಾಗಿ ಭೇಟಿಯಾಗುವ ಸಾಧ್ಯತೆ ಇದೆ.
ಹೀಗಾಗಿ, ಸಿಎಂ ಬದಲಾವಣೆ ಗೊಂದಲಗಳ ಬಗ್ಗೆ ಮತ್ತೊಂದು ಸುತ್ತಿನ ಚರ್ಚೆಯಾಗಲಿದೆಯೇ ಎಂಬ ಕುತೂಹಲ ಹೆಚ್ಚಾಗಿದೆ. ನಾಳೆ ದೆಹಲಿಯಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ. ಸಮಿತಿ ಸಭೆಯಲ್ಲಿ ಮುಂದಿನ ಹೋರಾಟಗಳ ಕುರಿತಾಗಿ ಕೆಲವೊಂದು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ. ಈ ಸಭೆಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಆಹ್ವಾನ ಸಿಕ್ಕಿದ್ದು, ಇಂದು ರಾತ್ರಿ ಅವರು ದೆಹಲಿ ತಲುಪಲಿದ್ದಾರೆ.
ಕಾರ್ಯಕಾರಿ ಸದಸ್ಯರ ಹೊರತಾಗಿ ಕಾಂಗ್ರೆಸ್ ಆಡಳಿತ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಮಾತ್ರ ಕಾಂಗ್ರೆಸ್ ಹೈಕಮಾಂಡ್ ಆಹ್ವಾನ ನೀಡಿದೆ. ಸಿಎಂ ಸಿದ್ದರಾಮಯ್ಯ, ತೆಲಂಗಾಲ ಸಿಎಂ ರೇವಂತ್ ರೆಡ್ಡಿ, ಹಿಮಾಚಲ ಪ್ರದೇಶ ಸಿಎಂ ಸುಖುವಿಂದರ್ ಸಿಂಗ್ ಸುಖುಗೆ ಆಹ್ವಾನ ನೀಡಿದೆ. ಈ ಹಿನ್ನೆಲೆ ಇಂದು ವಿಶೇಷ ವಿಮಾನದ ಮೂಲಕ ಸಿದ್ದರಾಮಯ್ಯ ದೆಹಲಿಗೆ ತೆರಳಲಿದ್ದಾರೆ.
ಈ ಸಭೆಯಲ್ಲಿ ವೋಟ್ ಚೋರಿ, ನ್ಯಾಷನಲ್ ಹೆರಾಲ್ಡ್, ಮನರೇಗಾ ಕಾಯ್ದೆ ರದ್ದು ಮಾಡಿದ ಕೇಂದ್ರ ಸರ್ಕಾರದ ನಿರ್ಧಾರಗಳ ವಿರುದ್ಧ ಹೋರಾಟಗಳನ್ನು ರೂಪಿಸುವ ಬಗ್ಗೆ ಚರ್ಚೆಗಳು ನಡೆಯಲಿದೆ. ಬಳಿಕ ಕೆಲವು ಮಹತ್ವದ ನಿರ್ಣಯಗಳಾಗುವ ಸಾಧ್ಯತೆ ಇದೆ. ಕಾರ್ಯಕಾರಿ ಸಭೆಯಲ್ಲಿ ಭಾಗಿಯಾದ ಬಳಿಕ ಸಿಎಂ ಸಿದ್ದರಾಮಯ್ಯ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಪ್ರತ್ಯೇಕ ಮಾತುಕತೆ ನಡೆಸುವ ಸಾಧ್ಯತೆ ಇದೆ. ರಾಜ್ಯದಲ್ಲಿ ನಾಯಕತ್ವ ಕುರಿತಾಗಿ ನಡೆಯುತ್ತಿರುವ ಬೆಳವಣಿಗೆಯ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರ ದೆಹಲಿ ಪ್ರವಾಸ ಸಾಕಷ್ಟು ಮಹತ್ವ ಪಡೆದುಕೊಂಡಿದೆ.
ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗೆ ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್ ಅವರಿಗೆ ಹೈಕಮಾಂಡ್ ಆಹ್ವಾನ ನೀಡಿಲ್ಲ. ಮೊನ್ನೆಯಷ್ಟೆ ಕೇಂದ್ರ ಸಚಿವರ ಭೇಟಿ ಹಿನ್ನೆಲೆ ಡಿಕೆಶಿ ದೆಹಲಿಗೆ ಭೇಟಿ ನೀಡಿದ್ದರು. ಈ ವೇಳೆ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿಲ್ಲ. ಈ ಹಿಂದೆ ಭೇಟಿಗೂ ಪ್ರಯತ್ನ ಪಟ್ಟರೂ ಸಾಧ್ಯವಾಗಿರಲಿಲ್ಲ. ಈಗ ಸಿಎಂ ಸಿದ್ದು ದೆಹಲಿ ಭೇಟಿ ನೀಡುತ್ತಿದ್ದು, ಈ ವೇಳೆ ಹೈಕಮಾಂಡ್ ನಾಯಕರು ಭೇಟಿಗೆ ಸಮಯ ನೀಡಿದರೆ ಮಹತ್ವದ ಚರ್ಚೆ ನಡೆಯಬಹುದು.














