ಮನೆ ರಾಷ್ಟ್ರೀಯ “ಆಪರೇಷನ್‌ ಸಿಂಧೂರ್” ಸಮಯದಲ್ಲಿ ಸೈನ್ಯಕ್ಕೆ ನೆರವು – ಬಾಲಕ ಶ್ರವಣ್ ಸಿಂಗ್‌ಗೆ ಪಿಎಂ ರಾಷ್ಟ್ರೀಯ ಬಾಲ...

“ಆಪರೇಷನ್‌ ಸಿಂಧೂರ್” ಸಮಯದಲ್ಲಿ ಸೈನ್ಯಕ್ಕೆ ನೆರವು – ಬಾಲಕ ಶ್ರವಣ್ ಸಿಂಗ್‌ಗೆ ಪಿಎಂ ರಾಷ್ಟ್ರೀಯ ಬಾಲ ಪುರಸ್ಕಾರ

0

ನವದೆಹಲಿ : ಆಪರೇಷನ್‌ ಸಿಂಧೂರ್ ಸಮಯದಲ್ಲಿ ಭಾರತೀಯ ಯೋಧರಿಗೆ ನೆರವು ನೀಡಿದ್ದ ಬಾಲಕ ಶ್ರವಣ್ ಸಿಂಗ್‌ಗೆ (10) ಮಕ್ಕಳಿಗೆ ನೀಡುವ ಅತ್ಯುನ್ನತ ಗೌರವ ‘ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ’ ಪ್ರಶಸ್ತಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನೀಡಿ ಸನ್ಮಾನಿಸಿದರು.

ಫಿರೋಜ್‌ಪುರ ಜಿಲ್ಲೆಯ ಗಡಿ ಗ್ರಾಮ ಮಾಮ್‌ಡೋಟ್‌ನ ಶ್ರವಣ್ ಸಿಂಗ್‌ ಆಪರೇಷನ್‌ ಸಿಂಧೂರ್ ಕಾರ್ಯಾಚರಣೆ ವೇಳೆ ತಮ್ಮ ಮನೆಯ ಬಳಿ ನಿಯೋಜಿಸಿದ್ದ ಸೈನಿಕರಿಗೆ ನೀರು, ಹಾಲು, ಚಹಾ, ಲಸ್ಸಿ ಸೇರಿದಂತೆ ಅಗತ್ಯ ವಸ್ತುಗಳನ್ನು ತಲುಪಿಸುತ್ತಿದ್ದ. ಇದಕ್ಕಾಗಿ ಪ್ರತಿದಿನ ಬೆಳಗ್ಗೆ ಸೇನಾ ಪೋಸ್ಟ್‌ಗಳಿಗೆ ತೆರಳುತ್ತಿದ್ದ. ಇದರಿಂದ ಸೈನಿಕರ ಜೊತೆ ಅವನಿಗೆ ಭಾವನಾತ್ಮಕ ಸಂಬಂಧ ಬೆಳೆದಿತ್ತು. ಆಪರೇಷನ್ ಸಿಂಧೂರ್ ಸಮಯದಲ್ಲಿ ಬಾಲಕನಿಗೆ ‘ಕಿರಿಯ ನಾಗರಿಕ ಯೋಧ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.

ಏಪ್ರಿಲ್‌ 22ರಂದು ಜಮ್ಮು ಮತ್ತು ಕಾಶ್ಮೀರದ ಬೈಸರನ್‌ ಕಣಿವೆ ಪ್ರದೇಶದಲ್ಲಿರುವ ಪಹಲ್ಗಾಮ್‌ನಲ್ಲಿ ನಾಲ್ವರು ಉಗ್ರರು ಅಟ್ಟಹಾಸ ಮೆರೆದಿದ್ದರು. ಓರ್ವ ವಿದೇಶಿಗ ಸೇರಿ 26 ಮಂದಿಯನ್ನು ಗುಂಡಿಕ್ಕಿ ಕೊಂದಿದ್ದರು. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಮುಂದಾದ ಭಾರತ ಆಪರೇಷನ್‌ ಸಿಂಧೂರ ಕಾರ್ಯಾಚರಣೆ ಶುರು ಮಾಡಿತು. ಮೇ 7ರ ಮಧ್ಯರಾತ್ರಿ ಪಾಕ್‌ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿದ್ದ ಉಗ್ರರ 9 ಅಡಗು ತಾಣಗಳನ್ನ ಧ್ವಂಸಗೊಳಿಸಿತ್ತು.

ಪಾಕಿಸ್ತಾನ ಕೂಡ ಪ್ರತಿದಾಳಿಗೆ ಮುಂದಾಗಿ ಭಾರತದ ಕೆಲ ನಗರಗಳ ಮೇಲೆ ಶೆಲ್‌ ದಾಳಿ ನಡೆಸಲು ಮುಂದಾಯಿತು. ಆದರೆ ಪಾಕ್‌ನ ದಾಳಿಯನ್ನು ಭಾರತೀಯ ಸೇನೆ ವಿಫಲಗೊಳಿಸಿತು. ಈ ವೇಳೆ ಭಾರತ ಪಾಕ್‌ ಗಡಿ ಪ್ರದೇಶದಲ್ಲಿ ತೀವ್ರ ಉದ್ವಿಗ್ನತೆ ಏರ್ಪಟ್ಟಿತ್ತು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಫಿರೋಜ್‌ಪುರದ ಮಾಮ್‌ಡೋಟ್ ಪ್ರದೇಶದ ತಾರಾ ವಾಲಿ ಗ್ರಾಮ ಶವಣ್‌ ಸಿಂಗ್‌ ಸೈನಿಕರಿಗೆ ನೀರು, ಐಸ್, ಚಹಾ, ಹಾಲು ಮತ್ತು ಲಸ್ಸಿಯನ್ನು ಖುದ್ದಾಗಿ ತಲುಪಿಸುತ್ತಿದ್ದ. ಗುಂಡು, ಶೆಲ್‌ಗಳ ಶಬ್ಧ, ಉದ್ವಿಗ್ನತೆಗೂ ಜಗ್ಗದೇ ನಿರ್ಭೀತಿಯಿಂಧ ಸೈನಿಕರ ಸೇವೆ ಮಾಡಿದ್ದ. 4ನೇ ತರಗತಿ ಓದುತ್ತಿರುವ ಶವನ್‌ನ ಈ ಸೇವೆ ಯೋಧರ ಹೃದಯ ಗೆದ್ದಿದೆ.

ಈತನ ಸೇವೆಯನ್ನು ಭಾರತೀಯ ಸೇನೆ ಶ್ಲಾಘಿಸಿದೆ. ಆದ್ದರಿಂದ ಶವನ್‌ ಸಿಂಗ್‌ನ ಶಿಕ್ಷಣದ ಸಂಪೂರ್ಣ ವೆಚ್ಚವನ್ನು ಸೇನೆಯೇ ನೋಡಿಕೊಳ್ಳುವುದಾಗಿ ಘೋಷಿಸಿತ್ತು. ಈ ಕುರಿತು ಮಾತನಾಡಿದ್ದ ಶವನ್‌ ಸಿಂಗ್‌, ಯೋಧನಾಗುವ ಕನಸು ಕಂಡಿರುವುದಾಗಿ ಹೇಳಿಕೊಂಡಿದ್ದ. ಯೋಧನಾಗಿ ಮುಂದೆ ದೇಶಸೇವೆ ಮಾಡುವುದಾಗಿ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದ ಎನ್ನಲಾಗಿದೆ.