ಮನೆ ಸುದ್ದಿ ಜಾಲ ಬೆಂಗಳೂರಿನ ಟಿಟಿಡಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿಗೆ ಸಿದ್ಧತೆ – ಭಕ್ತರಿಗೆ ವಿಶೇಷ ದರ್ಶನಕ್ಕೆ ವ್ಯವಸ್ಥೆ..!

ಬೆಂಗಳೂರಿನ ಟಿಟಿಡಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿಗೆ ಸಿದ್ಧತೆ – ಭಕ್ತರಿಗೆ ವಿಶೇಷ ದರ್ಶನಕ್ಕೆ ವ್ಯವಸ್ಥೆ..!

0

ಬೆಂಗಳೂರು : ಪವಿತ್ರ ವೈಕುಂಠ ಏಕಾದಶಿ ಪರ್ವದಿನದ ಪ್ರಯುಕ್ತ ಬೆಂಗಳೂರಿನ ವೈಯಾಲಿಕಾವಲ್‌ನ 16ನೇ ಕ್ರಾಸ್‌ನಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಟಿಟಿಡಿ ಮಾಹಿತಿ ಕೇಂದ್ರದಲ್ಲಿ ಡಿ.30 ರಂದು ಭಕ್ತರಿಗೆ ಶ್ರೀವಾರಿ ದರ್ಶನಕ್ಕಾಗಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಸ್ಥಳೀಯ ದೇವಸ್ಥಾನದ ವ್ಯವಸ್ಥೆಗಳ ಬಗ್ಗೆ ಮಾಹಿತಿ ನೀಡಿದ ಟಿಟಿಡಿ ಬೆಂಗಳೂರು ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷ ಕೆ.ವೀರಾಂಜನೇಯಲು ಮಾತನಾಡಿ, ವೈಕುಂಠ ಏಕಾದಶಿಯಂದು ಭಕ್ತರಿಗೆ ಸುಗಮ ಮತ್ತು ಅನುಕೂಲಕರ ದರ್ಶನ ಕಲ್ಪಿಸುವ ನಿಟ್ಟಿನಲ್ಲಿ ಸಮಿತಿಯು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಅಂದು ಮಧ್ಯರಾತ್ರಿ 1:35 ರಿಂದ ರಾತ್ರಿ 11:45 ರ ವರೆಗೆ ನಿರಂತರ ದರ್ಶನಕ್ಕೆ ಅವಕಾಶವಿರುತ್ತದೆ. ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಸರತಿ ಸಾಲಿನ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಪವಿತ್ರ ದಿನದಂದು ಆಗಮಿಸುವ ಭಕ್ತಾದಿಗಳಿಗೆ ನಿರಂತರ ಅನ್ನಪ್ರಸಾದ ವಿನಿಯೋಗವಿರುತ್ತದೆ ಎಂದು ತಿಳಿಸಿದರು. ದೇವಸ್ಥಾನದ ಆವರಣದಲ್ಲಿ ಮುಂಜಾನೆ 2 ಗಂಟೆಯಿಂದ ಶ್ರೀವಾರಿ ಲಡ್ಡು ಪ್ರಸಾದ ಮಾರಾಟವನ್ನು (ಪ್ರತಿ ಲಡ್ಡುವಿಗೆ 50 ರೂ.) ಆಯೋಜಿಸಲಾಗಿದೆ.

ದಾಸ್ತಾನು ಇರುವವರೆಗೂ ಇದು ಲಭ್ಯವಿರುತ್ತದೆ. ಭಕ್ತರ ಅನುಕೂಲಕ್ಕಾಗಿ 2026ರ ಟಿಟಿಡಿ ಡೈರಿಗಳು, ಕ್ಯಾಲೆಂಡರ್‌ಗಳು, ಅಗರಬತ್ತಿ ಮತ್ತು ಇತರೆ ಟಿಟಿಡಿ ಉತ್ಪನ್ನಗಳ ಮಾರಾಟ ಮಳಿಗೆಯನ್ನು ಸಹ ತೆರೆಯಲಾಗುವುದು. ಈ ಬಾರಿ 70 ಸಾವಿರ ಭಕ್ತರು ಆಗಮಿಸುವ ನಿರೀಕ್ಷೆಯಿದೆ ಎಂದು ಮಾಹಿತಿ ನೀಡಿದರು. ತಿರುಮಲದ ಸಿದ್ಧತೆಗಳ ಕುರಿತು ಮಾತನಾಡಿದ ಟಿಟಿಡಿ ಮಂಡಳಿ ಸದಸ್ಯ ಎಸ್.ನರೇಶ್ ಕುಮಾರ್ ಮಾತನಾಡಿ, ತಿರುಮಲದಲ್ಲಿಯೂ ವೈಕುಂಠ ಏಕಾದಶಿಯ ಪ್ರಯುಕ್ತ ಬೃಹತ್ ಮಟ್ಟದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಈ ಬಾರಿ ವೈಕುಂಠ ದ್ವಾರದ ಮೂಲಕ ಪ್ರತಿದಿನ ಸುಮಾರು 80,000 ಕ್ಕೂ ಹೆಚ್ಚು ಭಕ್ತರಿಗೆ ದರ್ಶನ ಭಾಗ್ಯವನ್ನು ಕಲ್ಪಿಸಲು ಟಿಟಿಡಿ ಆಡಳಿತ ಮಂಡಳಿ ಯೋಜಿಸಿದೆ. ಸಾಮಾನ್ಯ ಭಕ್ತರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಕಾಯುವ ಸಮಯದಲ್ಲಿ ಅನ್ನಪ್ರಸಾದ ಮತ್ತು ಪಾನೀಯಗಳ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಕ್ರಮ ಕೈಗೊಳ್ಳಲಾಗಿದೆ. ಭಕ್ತರ ಸುರಕ್ಷತೆ ಮತ್ತು ಸೌಕರ್ಯಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ವಿವರಿಸಿದರು.

ಈ ಪವಿತ್ರ ಸಂದರ್ಭವನ್ನು ಗುರುತಿಸಲು ಬೆಂಗಳೂರಿನ ಹಿಂದೂ ಧರ್ಮ ಪರಿರಕ್ಷಣಾ ಟ್ರಸ್ಟ್ ವತಿಯಿಂದ ದಿನವಿಡೀ ದೇವಸ್ಥಾನದ ಆವರಣದಲ್ಲಿ ಭಕ್ತಿ ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನ ಸಮಸ್ತ ಭಕ್ತಾದಿಗಳು ಈ ವೈಕುಂಠ ಏಕಾದಶಿ ಆಚರಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಶ್ರೀ ವೆಂಕಟೇಶ್ವರ ಸ್ವಾಮಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕೆಂದು ಟಿಟಿಡಿ ಅಧಿಕಾರಿಗಳು ಕೋರಿದ್ದಾರೆ.