ಕೋಲಾರ : ಇಂದು ವೈಕುಂಠ ಏಕಾದಶಿ ಸಂಭ್ರಮ ಮನೆ ಮಾಡಿದ್ದು, ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಚಿಕ್ಕ ತಿರುಪತಿ ದೇವಾಲಯಕ್ಕೆ ಭಕ್ತ ಸಾಗರವೇ ಹರಿದು ಬಂದಿದೆ.
ವೈಕುಂಠ ಏಕಾದಶಿ ಹಿನ್ನೆಲೆ ಚಿಕ್ಕ ತಿರುಪತಿ ದೇವಾಲಯದಲ್ಲಿ ಶ್ರೀ ಪ್ರಸನ್ನ ವೆಂಕಟೇಶ್ವರ ಸ್ವಾಮಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿದೆ. ದೇವಸ್ಥಾನ ಪ್ರವೇಶದ ಬಾಗಿಲ ಬಳಿ ವೈಕುಂಠ ದ್ವಾರ ನಿರ್ಮಾಣ ಮಾಡಿದ್ದು, ಅದೇ ದ್ವಾರದ ಮೂಲಕ ಭಕ್ತಾದಿಗಳಿಗೆ ಪ್ರವೇಶ ಕಲ್ಪಿಸಲಾಗಿದೆ.
ವೈಕುಂಠ ದ್ವಾರದ ಮೂಲಕ ಪ್ರವೇಶ ಮಾಡಿದರೆ ಸ್ವರ್ಗದ ಬಾಗಿಲು ತೆರೆಯುವ ನಂಬಿಕೆಯಿದೆ. ನಸುಕಿನ ಜಾವದಿಂದ ಭಕ್ತರು ತಿಮ್ಮಪನ ದರ್ಶನ ಪಡೆಯುತ್ತಿದ್ದಾರೆ. ಚಿಕ್ಕ ತಿರುಪತಿ ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿದ್ದು, ದೇವಸ್ಥಾನದ ಆವರಣವನ್ನು ವಿವಿಧ ಹೂವುಗಳಿಂದ ಸಿಂಗರಿಸಲಾಗಿದೆ. ಇಂದು ಸಂಜೆಯವರೆಗೆ ಒಂದು ಲಕ್ಷ ಜನರು ದರ್ಶನ ಪಡೆಯುವ ಸಾಧ್ಯತೆ ಇದೆ.
ಚಿಕ್ಕ ತಿರುಪತಿ ಆಂಧ್ರದ ದೊಡ್ಡ ತಿರುಪತಿಯಷ್ಟೇ ಶ್ರೇಷ್ಠತೆ ಹೊಂದಿದೆ. ಬೆಂಗಳೂರು, ತಮಿಳುನಾಡು ಸೇರಿದಂತೆ ರಾಜ್ಯದ ಬೇರೆ ಬೇರೆ ಕಡೆಗಳಿಂದ ಭಕ್ತರು ಇಲ್ಲಿಗೆ ಆಗಮಿಸಿದ್ದು, ಭಕ್ತಾಧಿಗಳಿಗೆ ದೇವಸ್ಥಾನ ಮಂಡಳಿ ಹಾಗೂ ದಾನಿಗಳಿಂದ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಭದ್ರತೆಗಾಗಿ ದೇವಸ್ಥಾನದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.















