ಹೊಸ ವರ್ಷದ ಆಚರಣೆಗೆ ಜನ ಪ್ರವಾಸಿ ತಾಣಗಳತ್ತ ಮುಖಮಾಡಿದ್ದಾರೆ. ಕರ್ನಾಟಕದ ಪ್ರವಾಸಿತಾಣಗಳು ಜನ ಜಂಗುಳಿಯಿಂದ ತುಂಬಿ ತುಳುಕುತ್ತಿದೆ. ಪ್ರವಾಸಿಗರು ಹೊಸ ವರ್ಷಕ್ಕೆ ವೆಲ್‌ಕಂ ಹೇಳೋದಕ್ಕೆ ಪ್ರವಾಸಿ ತಾಣಗಳಲ್ಲಿ ಕಾತರದಿಂದ ಕಾಯುತ್ತಿದ್ದಾರೆ. ಹೋಂ ಸ್ಟೇ, ರೆಸಾರ್ಟ್, ಲಾಡ್ಜ್, ಹೋಟೆಲ್‌ಗಳು ಕೂಡ ತುಂಬಿ ತುಳುಕುತ್ತಿವೆ.
ಪ್ರಕೃತಿಯ ಸೂರಿನಡಿ ಕಾಫಿನಾಡ ಸೌಂದರ್ಯ ಸವಿಯುತ್ತ ಹೊಸ ವರ್ಷಕ್ಕೆ ವೆಲ್‌ಕಂ ಹೇಳೋದಕ್ಕೆ ಲಕ್ಷಾಂತರ ಪ್ರವಾಸಿಗರು ಕಾತರದಿಂದಿದ್ದಾರೆ. ಈ ವರ್ಷದ ಮಹಾಮಳೆಯ ಮಧ್ಯೆಯೂ ಕಾಫಿನಾಡಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಬಂದಿದೆ. ಮುಳ್ಳಯ್ಯನಗಿರಿ, ಬಾಬಾಬುಡನ್ ಗಿರಿ, ಸೀತಾಳಯ್ಯನಗಿರಿ, ಶೃಂಗೇರಿ, ಹೊರನಾಡು, ಕುದುರೆಮುಖ ಸೇರಿದಂತೆ ಪ್ರಮುಖ ಗಿರಿಶಿಖರಗಳಲ್ಲಿ ಪ್ರವಾಸಿಗರು ಹೊಸ ವರ್ಷದ ರಾತ್ರಿಗಾಗಿ ಹಾತೊರೆಯುತ್ತಿದ್ದಾರೆ.
ಅಪರೂಪದ ಪ್ರಕೃತಿ ಸೌಂದರ್ಯ ಕಂಡು ಮಲೆನಾಡ ಮಡಿಲಲ್ಲಿ ಮೈಮರೆಯುತ್ತಿದ್ದಾರೆ. ಹೆಚ್ಚಿನ ಪ್ರವಾಸಿಗರಿರುವುದರಿಂದ ವಾಹನಗಳನ್ನ ಕಂಟ್ರೋಲ್ ಮಾಡೋದಕ್ಕೆ ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಹೋಂಸ್ಟೆ, ರೆಸಾರ್ಟ್ ಮಾಲೀಕರು, ಡಿಜೆ ಪಾರ್ಟಿ, ಫೈರ್ ಕ್ಯಾಂಪ್ ಸೇರಿದಂತೆ ಪ್ರವಾಸಿಗರ ಬಳಿ ದುಬಾರಿ ಹಣ ವಸೂಲಿಯೂ ನಡೆದಿದೆ.
ಮಂಡ್ಯ ಜಿಲ್ಲೆಯ ಪ್ರವಾಸಿತಾಣಗಳು – ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಲಗ್ಗೆ ಇಡುತ್ತಿದ್ದಾರೆ. ಅದರಲ್ಲೂ ಶ್ರೀರಂಗಪಟ್ಟಣ ತಾಲೂಕಿನ ರಂಗನತಿಟ್ಟು ಪಕ್ಷಿಧಾಮಕ್ಕೆ ಪ್ರವಾಸಿಗರ ಹಿಂಡು ಬಂದು ಪಕ್ಷಿ ಸಂಕುಲವನ್ನು ವೀಕ್ಷಿಣೆ ಮಾಡುತ್ತಿದ್ದಾರೆ. ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಇಲ್ಲಿ ದೋಣಿ ವಿಹಾರ ಮಾಡಿ ಮೊಸಳೆ ಹಾಗೂ ಪಕ್ಷಿ ಸಂಕುಲವನ್ನು ವೀಕ್ಷಣೆ ಮಾಡಿ ಎಂಜಾಯ್ ಮಾಡುತ್ತಿದ್ದಾರೆ.
ಅಂಜನಾದ್ರಿ ಬೆಟ್ಟ – ಅತ್ತ ಹನುಮ ಜನ್ಮಸ್ಥಳ ಅಂಜನಾದ್ರಿಗೆ ಲಕ್ಷಾಂತರ ಭಕ್ತರು ಆಗಮಿಸಿದ ಹಿನ್ನೆಲೆ ಅಂಜನಾದ್ರಿ ಬೆಟ್ಟ ಸಂಪೂರ್ಣ ಜಾಮ್ ಆಗಿದೆ. ಬೆಟ್ಟದ ಮೇಲೆ ಏರಿ ಆಂಜನೇಯನ ದರ್ಶನ ಪಡೆಯಲು ಜನರು ಹರಸಾಹಸ ಪಡುತ್ತಿದ್ದಾರೆ. ಗಂಟೆಗಳ ಕಾಲ ಕಾದು ಭಕ್ತರು ಆಂಜನೇಯನ ದರ್ಶನ ಪಡೆದುಕೊಂಡಿದ್ದಾರೆ. ಇನ್ನು ಸಂಚಾರ ನಿಯಂತ್ರಣಕ್ಕೆ ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಒಟ್ಟಿನಲ್ಲಿ ಹೊಸ ವರ್ಷದ ಆಚರಣೆಗೆ ಜನ ಪ್ರವಾಸಿ ತಾಣಗಳತ್ತ ಮುಖಮಾಡಿದ್ದಾರೆ. ಕರ್ನಾಟಕದ ಪ್ರವಾಸಿತಾಣಗಳು ಜನ ಜಂಗುಳಿಯಿಂದ ತುಂಬಿ ತುಳುಕುತ್ತಿದೆ.















