ಮಂಡ್ಯ : ಇಂದು 2025ಕ್ಕೆ ಗುಡ್ ಬೈ ಹೇಳಿ, 2026ರನ್ನು ವೆಲ್ಕಮ್ ಮಾಡಿಕೊಳ್ಳಲು ಇಡೀ ವಿಶ್ವ ತುದಿಗಾಲಲ್ಲಿ ನಿಂತಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲೂ ಜನರು ಹೊಸ ವರ್ಷದ ಸೆಲಬ್ರೇಷನ್ ಮಾಡಿಕೊಳ್ಳಲು ಜನರು ಹಲವು ತಯಾರಿ ಮಾಡಿಕೊಂಡಿದ್ದಾರೆ. ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲೂ ಪೊಲೀಸ್ ಇಲಾಖೆ ಹೊಸ ವರ್ಷಾಚರಣೆ ಮೇಲೆ ಹದ್ದಿನ ಕಣ್ಣು ಇಟ್ಟಿದೆ.
ಪ್ರಮುಖವಾಗಿ ಕಾವೇರಿ ನದಿ ತೀರದಲ್ಲಿ ಪೊಲೀಸ್ ಇಲಾಖೆ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದೆ. ಪ್ರತಿ ವರ್ಷ ಹೊಸ ವರ್ಷದ ಸಂಭ್ರಮಾಚರಣೆಯ ನೆಪದಲ್ಲಿ ಜನರು ಕಾವೇರಿ ನದಿಗೆ ಇಳಿದು ಮೋಜು ಮಸ್ತಿ ಮಾಡುತ್ತಿದ್ದರು. ಈ ವೇಳೆ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆಯೂ ಸಹ ಹೆಚ್ಚಾಗುತ್ತಿತ್ತು. ಈ ಸಾವು ನೋವುಗಳಿಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಕಾವೇರಿ ತೀರದಲ್ಲಿ ಇಂದು ಬೆಳಗ್ಗೆ 6ಗಂಟೆಯಿಂದ ಜನವರಿ 2ರ ಬೆಳಗ್ಗೆ 6ಗಂಟೆಯವರೆಗೆ ನಿಷೇಧಾಜ್ಞೆ ಜಾರಿ ಮಾಡಿದೆ.
ಕಾವೇರಿ ತೀರದಲ್ಲಿ ಯಾರೂ ಅಡಿಗೆ ಮಾಡಿ ಊಟ ಮಾಡೋದು, ಮದ್ಯ ಸೇವನೆ ಮಾಡದಂತೆ ಮುಂಜಾಗ್ರತಾ ಕ್ರಮ ವಹಿಸಲಾಗಿದೆ. ಜೊತೆಗೆ ಬಲಮುರಿ, ಎಡಮುರಿ, ವೇಣುಗೋಪಾಲಸ್ವಾಮಿ ದೇವಸ್ಥಾನ, ಮುತ್ತತ್ತಿ, ಕಾವೇರಿ ಹಿನ್ನೀರು ಸೇರಿದಂತೆ ಮೊದಲಾದ ಕಡೆ ಜನರು ನದಿಗೆ ಇಳಿಯದಂತೆ ಕಟ್ಟೆಚ್ಚರ ವಹಿಸಲಾಗಿದೆ. ಇದಲ್ಲದೇ ಹೊಸ ವರ್ಷಾಚರಣೆಯ ನೆಪದಲ್ಲಿ ಡ್ರಗ್ಸ್, ಗಾಂಜಾಗಳಂತಾ ಮಾದಕ ವಸ್ತುಗಳ ಬಳಿಕೆಯ ವಿಚಾರದಲ್ಲಿ ಮಂಡ್ಯ ಖಾಕಿ ಅಲರ್ಟ್ ಆಗಿದೆ.














