ಮನೆ ಸುದ್ದಿ ಜಾಲ ಪ್ರತಿ ಜಿಲ್ಲೆಯಲ್ಲಿ ಕನಿಷ್ಠ 50 ಕೆರೆಗಳನ್ನು ಅಭಿವೃದ್ದಿ ಪಡಿಸಲಾಗುವುದು: ಸಚಿವ ಬಿಶ್ವೇಶ್ವರ್ ಟುಡು

ಪ್ರತಿ ಜಿಲ್ಲೆಯಲ್ಲಿ ಕನಿಷ್ಠ 50 ಕೆರೆಗಳನ್ನು ಅಭಿವೃದ್ದಿ ಪಡಿಸಲಾಗುವುದು: ಸಚಿವ ಬಿಶ್ವೇಶ್ವರ್ ಟುಡು

0

ಮೈಸೂರು (Mysuru): 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಜಲಶಕ್ತಿ ಅಭಿಯಾನದ ಯೋಜನೆಯಡಿ ಪ್ರತಿ ಜಿಲ್ಲೆಯಲ್ಲಿ ಕನಿಷ್ಠ 50 ಕರೆಗಳನ್ನು ಅಬಿವೃದ್ದಿಪಡಿಸಿ ಅಂತರ್ಜಲ ಮಟ್ಟವನ್ನು ಹೆಚ್ಚಿಸಲಾಗುವುದು ಎಂದು ಕೇಂದ್ರ ಸರ್ಕಾರದ ಜಲಶಕ್ತಿ ಹಾಗೂ ಬುಡಕಟ್ಟು ವ್ಯವಹಾರಗಳ ರಾಜ್ಯ ಸಚಿವರಾದ ಬಿಶ್ವೇಶ್ವರ ಟುಡು ತಿಳಿಸಿದರು.

ಮಹಾತ್ಮ ಗಾಂಧಿ ನರೇಗಾ ಯೋಜನೆಯ ಜಲಶಕ್ತಿ ಅಭಿಯಾನದಡಿ ತಾಲ್ಲೂಕಿನ ನಾಗವಾಲ ಗ್ರಾಮದಲ್ಲಿ ಅನುಷ್ಠಾನಗೊಂಡಿರುವ ಕಲ್ಯಾಣಿ ಪುನಶ್ಚೇತನ, ಸಾಕದೇವಮ್ಮನ ಕಟ್ಟೆ ಕಾಮಗಾರಿ ಹಾಗೂ ಹುಣಸೂರು ತಾಲ್ಲೂಕಿನ ಬಿಳಿಕೆರೆ ಮತ್ತು ಹುಸೇನಪುರ ಗ್ರಾಮ ಪಂಚಾಯಿತಿಯ ಪಟ್ಟಲದಮ್ಮನ ಕೆರೆ ಮತ್ತು ಗ್ರಾಮ ಪಂಚಾಯಿತಿ ಕಟ್ಟಡ, ಉದ್ಯಾನವನ, ಗುರುಮಠ ಕಟ್ಟೆ ಕೆರೆ ಕಾಮಗಾರಿ ಸ್ಥಳಕ್ಕೆ ಸಂಸತ್ತಿನ ಸಲಹ ಸಮಿತಿಯ ಸದಸ್ಯರೊಂದಿಗೆ ಕೇಂದ್ರದ ಜಲಶಕ್ತಿ ಖಾತೆ ರಾಜ್ಯ ಸಚಿವ ಬಿಶ್ವೇಶ್ವರ್ ಟುಡು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿ ಅವರು, ಜಲಶಕ್ತಿ ಯೋಜನೆಯಡಿ ಹಲವು ಅಭಿವೃದ್ದಿ ಕಾರ್ಯಗಳನ್ನು ಮಾಡಲಾಗುತ್ತಿದೆ. ಪ್ರತಿ ಮನೆ ಮನೆಗೂ ಕುಡಿಯುವ ನೀರನ್ನು ಪೂರೈಸಲು ಯೋಜನೆ ರೂಪಿಸಲಾಗಿದೆ. ಅಂತರ್ಜಲ ಅಭಿವೃದ್ದಿ ಪಡಿಸಲು ಚೆಕ್ ಡ್ಯಾಂ ಗಳನ್ನು ನಿರ್ಮಿಸಲಾಗುತ್ತಿದೆ. ರಾಜ್ಯ ಸರ್ಕಾರವು ಅಂತರ್ಜಲ ಮಟ್ಟವನ್ನು ಅಭಿವೃದ್ದಿ ಪಡಿಸಲು ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ. ಗ್ರಾಮೀಣ ಪ್ರದೇಶಗಳು ಎದುರಿಸುತ್ತಿರುವ ಜಲಮೂಲಗಳ ಸಮಸ್ಥೆ ನಿವಾರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಜಲಶಕ್ತಿ ಅಭಿಯಾನ ಹಮ್ಮಿಕೊಂಡಿದೆ. ಈ ಅಭಿಯಾನದ ಮೂಲಕ ಜಲಮೂಲಗಳನ್ನು ಅಭಿವೃದ್ಧಿಪಡಿಲಾಗುವುದು ಎಂದು ಹೇಳಿದರು.

ಗುಜರಾತ್, ಒರಿಸ್ಸಾ ಹಾಗೂ ಇನ್ನಿತರೆ ರಾಜ್ಯದಿಂದ ಆಗಮಿಸಿದ್ದ ಸಂಸದರು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮ-ನರೇಗಾ ಯೋಜನೆಯಡಿ ಅನುಷ್ಟಾನಗೊಂಡಿರುವ ಹಲವಾರು ಕಾಮಗಾರಿಗಳ ಬಗ್ಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಆಯುಕ್ತೆ ಶಿಲ್ಪನಾಗ್, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್.ಪೂರ್ಣಿಮಾ, ಉಪ ಕಾರ್ಯದರ್ಶಿ (ಅಭಿವೃದ್ಧಿ) ಡಾ.ಎಂ.ಕೃಷ್ಣರಾಜು, ಸಹಾಯಕ ಕಾರ್ಯದರ್ಶಿ ವಿ.ಪಿ.ಕುಲದೀಪ್, ಮೈಸೂರು ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್.ರಮೇಶ್, ಹುಣಸೂರು ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಮನು. ಬಿ.ಕೆ, ಸಹಾಯಕ ನಿರ್ದೇಶಕ (ಗ್ರಾ.ಉ) ಕೆ.ಎಂ.ರಘುನಾಥ್, ಹೆಚ್.ಡಿ.ಲೋಕೇಶ್, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಡಾ.ಶೋಭರಾಣಿ, ನಾಗರಾಜು, ಮಹದೇವಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.