ದಳಪತಿ ವಿಜಯ್ ಅವರ ಕೋಟ್ಯಂತರ ಅಭಿಮಾನಿಗಳು ಕುತೂಹಲದಿಂದ ನಿರೀಕ್ಷಿಸುತ್ತಿದ್ದ ʻಜನನಾಯಗನ್ʼ ಸಿನಿಮಾ ಬಿಡುಗಡೆಗೆ ಕೊನೆಗೂ ಗ್ರೀನ್ ಸಿಗ್ನಲ್ ಸಿಕ್ಕಿದೆ. ಮದ್ರಾಸ್ ಹೈಕೋರ್ಟ್ ಶುಕ್ರವಾರ (ಇಂದು) ʻಜನ ನಾಯಗನ್ʼ ಸಿನಿಮಾಕ್ಕೆ ಯುಎ ಪ್ರಮಾಣ ಪತ್ರ ನೀಡುವಂತೆ ಸೆನ್ಸಾರ್ ಮಂಡಳಿಗೆ ಆದೇಶಿಸಿದೆ. ಬದಲಾವಣೆಗಳನ್ನು ಮಾಡಿದ ಬಳಿಕ ಪ್ರಮಾಣ ಪತ್ರ ನೀಡಬೇಕೆಂದು ಸೆನ್ಸಾರ್ ಮಂಡಳಿಗೆ ಆದೇಶಿಸಿದೆ. ಮದ್ರಾಸ್ ಹೈಕೋರ್ಟ್ ಆದೇಶವು ಸೆನ್ಸಾರ್ ಸಂಕಷ್ಟಕ್ಕೆ ಸಿಲುಕಿದ್ದ ಸಿನಿ ತಂಡಕ್ಕೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.
ಅಲ್ಲದೇ ಇಂತಹ ದೂರುಗಳಿಗೆ ಉತ್ತೇಜನ ನೀಡುವುದು ಅಪಾಯಕಾರಿ ಪ್ರವೃತ್ತಿ. ಜನನಾಯಗನ್ ವಿರುದ್ಧ ಸಿನಿಮಾ ವಿರುದ್ಧ ಮೊದಲು ದೂರು ನೀಡಿ, ನಂತರ ಚಿಂತನೆ ಮಾಡ್ತಿರುವಂತೆ ತೋರುತ್ತದೆ ಎಂದು ಸೆನ್ಸಾರ್ ಮಂಡಳಿಯನ್ನ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತು. ಪೊಂಗಲ್ ಹಬ್ಬಕ್ಕೆ ಒಂದು ವಾರದ ಮುನ್ನಾ ದಿನವಾದ ಜನವರಿ 9ರಂದು (ಇಂದು), ವಿಶ್ವದಾದ್ಯಂತ ಜನನಾಯಗನ್ ಸಿನಿಮಾ ಬಿಡುಗಡೆಯಾಗಬೇಕಿತ್ತು. ತಮಿಳು ಚಿತ್ರಗಳನ್ನು ಹೆಚ್ಚುಹೆಚ್ಚು ಪ್ರದರ್ಶಿಸುವ ಬೆಂಗಳೂರಿನ ಚಿತ್ರಮಂದಿರಗಳಲ್ಲಿ ವಿಜಯ್ ಕಟೌಟ್ ರಾರಾಜಿಸುತ್ತಿದ್ದವು. ಆದ್ರೆ ಸೆನ್ಸಾರ್ ಮಂಡಳಿಯ ನಿರ್ಧಾರವು ಅಭಿಮಾನಿಗಳ ಆಸೆಗೆ ತಣ್ಣೀರು ಎರಚಿತ್ತು.
ʻಜನನಾಯಗನ್ʼ ತಮ್ಮ ಕೊನೆಯ ಸಿನಿಮಾ ಎಂದು ಈಗಾಗಲೇ ವಿಜಯ್ ಮಲೇಷ್ಯಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು. ಹಾಗಾಗಿ, ಫ್ಯಾನ್ಸ್ ಈ ಸಿನಿಮಾದ ಮೇಲೆ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಮತ್ತೊಂದು ಕಡೆ ಕೇಂದ್ರ ಸರ್ಕಾರದ ದ್ವೇಷದ ರಾಜಕಾರಣ ಇದು ಅನ್ನೋ ಕೂಗು ವಿಜಯ್ ಅಭಿಮಾನಿಗಳ ಕಡೆಯಿಂದ ಕೇಳಿಬಂದಿದೆ. ಬ್ರಿಟನ್ ನಲ್ಲಿ ಸುಮಾರು 260 ಕ್ಕೂ ಹೆಚ್ಚು ಶೋಗಳನ್ನು ಜನನಾಯಗನ್ ಚಿತ್ರಕ್ಕೆ ನೀಡಲಾಗಿತ್ತು. ಇದುವರೆಗೆ, ಸುಮಾರು 65 ಸಾವಿರಕ್ಕೂ ಹೆಚ್ಚು ಟಿಕೆಟ್’ಗಳು ಮಾರಾಟವಾಗಿದ್ದವು.














