ಹಾಸನ : ಈ ಗಿರಾಕಿ ಎಲ್ಲಿದ್ದ..? ಅವನು ಇಷ್ಟು ಮಾತನಾಡುತ್ತಾನಾ, ಇವನಿಗೆ ನಾನು ಹೆದರುತ್ತೀನಾ ಎಂದು ಪ್ರಶ್ನಿಸುವ ಮೂಲಕ ಮಾಜಿ ಸಚಿವ ಹೆಚ್ಡಿ ರೇವಣ್ಣ ಅವರು ಅರಸೀಕೆರೆ ಶಾಸಕ ಶಿವಲಿಂಗೇಗೌಡ ಅವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಅರಸೀಕೆರೆಯಿಂದ ಸ್ಪರ್ಧೆ ಮಾಡುವಂತೆ ಶಿವಲಿಂಗೇಗೌಡ ಪಂಥಾಹ್ವಾನ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಆಲೂರು ತಾಲ್ಲೂಕಿನಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ರೇವಣ್ಣ ಅವನಿಗೆ ತಾಕತ್ ಇದ್ಯಾ..? ಆ ಸಮಾಜ ಹೆಸರು ಹೇಳಿಕೊಂಡು ಇಪ್ಪತ್ತು ವರ್ಷ ರಾಜಕೀಯ ಮಾಡಿದ್ದಾನೆ. ಅರಸೀಕೆರೆಯಲ್ಲಿ ಏನು ನಡೆಯುತ್ತಿದೆ ನನಗೆ ಗೊತ್ತಿದೆ. ಇದು ಏನು ಇಲ್ಲಿಗೆ ಮುಗಿಯುವುದಿಲ್ಲ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿ ಪಂಥಾಹ್ವಾನ ಸ್ವೀಕರಿಸಿದರು.
ನಾನು ಸವಾಲನ್ನು ಸ್ವೀಕಾರ ಮಾಡುತ್ತೇನೆ. ಆದರೆ ಹೈಕಮಾಂಡ್ ತೀರ್ಮಾನ ಮಾಡಬೇಕು. ಅವನು ಈ ಮಟ್ಟಕ್ಕೆ ಬರಬೇಕಾದರೆ ಏನೇನು ಮಾಡಿದ್ದೇವೆ ಎನ್ನುವುದು ನನಗೆ ಗೊತ್ತಿದೆ. ಹಲವಾರು ಜನರ ಕಷ್ಟಗಳನ್ನು ಪರಿಹಾರ ಮಾಡಿದ ಜೇನುಕಲ್ ಸಿದ್ದೇಶ್ವರ ಸ್ವಾಮಿ ದೇವಸ್ಥಾನ ಅವರ ಕ್ಷೇತ್ರದಲ್ಲಿ ಇದ್ದು ಸತ್ಯ ಹೇಳಬೇಕು. ಅಂದು ನಮ್ಮ ಸಮುದಾಯದವರು ಒಕ್ಕಲಿಗರಿಗೆ ಟಿಕೆಟ್ ನೀಡಿ ಎಂದಿದ್ದರು. ಆದರೂ ಕುರುಬ ಸಮುದಾಯದ ಬಿಳಿ ಚೌಡಯ್ಯ ಅವರನ್ನು ಜಿ.ಪಂ. ಉಪಾಧ್ಯಕ್ಷರನ್ನಾಗಿ ಮಾಡಿದೆ. ಈಗ ವ್ಯಾಪಾರ ನಡೆಯುತ್ತಿದ್ದು ನಾಲ್ಕು ಬಾರಿ ಗೆಲ್ಲಿಸಿದವರು ಯಾರು ಎಂದು ಪ್ರಶ್ನಿಸಿದರು.

ಚುನಾವಣೆಯಲ್ಲಿ ಸೋತ ದಿನ ಆ ಗಿರಾಕಿಯನ್ನು ಸಾಯಂಕಾಲ ನಮ್ಮ ಮನೆಗೆ ಕರೆದುಕೊಂಡು ಹೋಗಿ ಊಟ ಹಾಕಿದೆ. ಲಿಂಗಾಯಿತ ಸಮುದಾಯದವರಿಗೆ ಅರಸೀಕೆರೆ ಕ್ಷೇತ್ರ ನೀಡಬೇಕು ಎಂದು ನನ್ನ ತಂದೆಯವರು ಹೇಳಿದ್ದರು. ಆದರೆ ಅವರ ಮಾತು ಮೀರಿ ನಾನು ತಪ್ಪು ಮಾಡಿ ಎಲ್ಲೋ ಇದ್ದ ಈ ಕೊಚ್ಚೆಗೆ ಸೀಟ್ ನೀಡಿದೆ ಎಂದು ಸಿಟ್ಟು ಹೊರಹಾಕಿದರು.
ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಲು ನಾನು, ಕುಮಾರಸ್ವಾಮಿ ಸಹಿ ಹಾಕಿದೆವು. ನಮ್ಮ ಸಮಾಜದವರು ಏನು ಸಿದ್ದರಾಮಯ್ಯ ಅವರ ಪರ ಸಹಿ ಹಾಕಿದ್ದೀರಾ ಎಂದರು. ಐವತ್ತು ಸಾವಿರ ಮತಗಳ ಅಂತರದಲ್ಲಿ ಹಾಸನದಲ್ಲಿ ನಾನು ಗೆಲ್ಲುತ್ತೇನೆ. ರೇವಣ್ಣ ಅವರೇ ಬನ್ನಿ ಎಂದು ಒಬ್ಬರು ಸವಾಲು ಹಾಕಿದರು. ಆಗ ನಾನು ನನ್ನ ಪತ್ನಿಯನ್ನು ಹಾಸನ ಚುನಾವಣೆ ವಿಚಾರವಾಗಿ ಓಡಾಡಲು ಕಳುಹಿಸಿದೆ. ಅವತ್ತು ಸಾಮಾನ್ಯ ಕಾರ್ಯಕರ್ತ ಸ್ವರೂಪ್ಪ್ರಕಾಶ್ ಅವರನ್ನು ನಿಲ್ಲಿಸಿದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಮಾಜಿ ಶಾಸಕ ಪ್ರೀತಂಗೌಡ ಅವರನ್ನು ರೇವಣ್ಣ ತಿವಿದರು ಎಂದ್ರು.















