ಮನೆ ಅಂತಾರಾಷ್ಟ್ರೀಯ ಆದಷ್ಟು ಬೇಗ ದೇಶ ಬಿಟ್ಟು ಹೊರಡಿ – ಇರಾನ್​​ನ ಭಾರತೀಯ ಪ್ರಜೆಗಳಿಗೆ ಸೂಚನೆ…!

ಆದಷ್ಟು ಬೇಗ ದೇಶ ಬಿಟ್ಟು ಹೊರಡಿ – ಇರಾನ್​​ನ ಭಾರತೀಯ ಪ್ರಜೆಗಳಿಗೆ ಸೂಚನೆ…!

0

ನವದೆಹಲಿ : ಇರಾನ್‌ನಲ್ಲಿ ಪ್ರತಿಭಟನೆಗಳು ಉಲ್ಬಣಗೊಳ್ಳುತ್ತಿದ್ದಂತೆ ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಭಾರತೀಯ ಪ್ರಜೆಗಳಿಗೆ ಹೊಸ ಸೂಚನೆಯನ್ನು ನೀಡಿದೆ. ಪ್ರಸ್ತುತ ಇರಾನ್‌ನಲ್ಲಿರುವ ಭಾರತೀಯ ಪ್ರಜೆಗಳು, ವಿದ್ಯಾರ್ಥಿಗಳು, ಯಾತ್ರಿಕರು, ವ್ಯಾಪಾರಸ್ಥರು ಮತ್ತು ಪ್ರವಾಸಿಗರು ವಾಣಿಜ್ಯ ವಿಮಾನಗಳು ಸೇರಿದಂತೆ ತಮಗೆ ಲಭ್ಯವಿರುವ ಸಾರಿಗೆ ವಿಧಾನಗಳ ಮೂಲಕ ಕೂಡಲೇ ಇರಾನ್ ಬಿಟ್ಟು ಹೊರಡುವಂತೆ ಭಾರತೀಯ ರಾಯಭಾರ ಕಚೇರಿಯು ಸೂಚನೆ ನೀಡಿದೆ. ಇರಾನ್​ನ ಉದ್ವಿಗ್ನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ರಾಯಭಾರ ಕಚೇರಿ ಈ ಸೂಚನೆ ನೀಡಿದೆ.

ಇರಾನ್‌ನಲ್ಲಿರುವ ಎಲ್ಲಾ ಭಾರತೀಯ ನಾಗರಿಕರು ಮತ್ತು ಪಿಐಒಗಳು ಸರಿಯಾದ ಎಚ್ಚರಿಕೆ ವಹಿಸಬೇಕೆಂದು ರಾಯಭಾರ ಕಚೇರಿಯು ಪುನರುಚ್ಚರಿಸಿದೆ. ಪ್ರತಿಭಟನೆಗಳು ನಡೆಯುತ್ತಿರುವ ಪ್ರದೇಶಗಳಲ್ಲಿ ಹೆಚ್ಚು ಜಾಗೃತರಾಗಿರಲು ಭಾರತೀಯ ಪ್ರಜೆಗಳಿಗೆ ಸೂಚಿಸಲಾಗಿದೆ. ಹಾಗೇ, ಭಾರತೀಯ ನಾಗರಿಕರು ಇರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿರಲು ಮತ್ತು ಎಲ್ಲ ರೀತಿಯ- ಬೆಳವಣಿಗೆಗಳಿಗಾಗಿ ಸ್ಥಳೀಯ ಮಾಧ್ಯಮ ವರದಿಗಳನ್ನು ವೀಕ್ಷಿಸಲು ಸೂಚಿಸಲಾಗಿದೆ.

ಭಾರತೀಯ ಪ್ರಜೆಗಳು ತಮ್ಮ ವಲಸೆ ದಾಖಲೆಗಳನ್ನು ಲಭ್ಯವಿರಿಸಿಕೊಳ್ಳುವಂತೆ ರಾಯಭಾರ ಕಚೇರಿಯು ಸೂಚಿಸಿದೆ. “ಇರಾನ್‌ನಲ್ಲಿರುವ ಎಲ್ಲಾ ಭಾರತೀಯ ಪ್ರಜೆಗಳು ತಮ್ಮ ಪ್ರಯಾಣ ಮತ್ತು ವಲಸೆ ದಾಖಲೆಗಳು, ಪಾಸ್‌ಪೋರ್ಟ್‌ಗಳು ಮತ್ತು ಐಡಿಗಳು ಸೇರಿದಂತೆ ಎಲ್ಲ ದಾಖಲೆಗಳನ್ನು ತಮ್ಮ ಜೊತೆಯಲ್ಲೇ ರೆಡಿ ಇಟ್ಟುಕೊಳ್ಳಲು ಕೋರಲಾಗಿದೆ. ಈ ನಿಟ್ಟಿನಲ್ಲಿ ಯಾವುದೇ ಸಹಾಯಕ್ಕಾಗಿ ಅವರು ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ” ಎಂದು ಸಲಹಾ ಸಂಸ್ಥೆ ತಿಳಿಸಿದೆ.

ಭಾರತೀಯ ರಾಯಭಾರ ಕಚೇರಿಯ ತುರ್ತು ಸಂಪರ್ಕ ಸಹಾಯವಾಣಿ ಸಂಖ್ಯೆ ಇಲ್ಲಿದೆ. ಯಾವುದೇ ರೀತಿಯ ತುರ್ತು ಅಗತ್ಯವಿದ್ದರೆ ಮೊಬೈಲ್ ಸಂಖ್ಯೆಗಳು: +989128109115; +989128109109; +989128109102; +989932179359. ಇಮೇಲ್: cons.tehran@mea.gov.in” ಸಂಪರ್ಕಿಸಿ ಎಂದು ರಾಯಭಾರ ಕಚೇರಿ ತಿಳಿಸಿದೆ. ಭಾರತೀಯ ರಾಯಭಾರ ಕಚೇರಿಯಲ್ಲಿ ಇನ್ನೂ ನೋಂದಾಯಿಸದ ಇರಾನ್‌ನಲ್ಲಿರುವ ಎಲ್ಲಾ ಭಾರತೀಯ ಪ್ರಜೆಗಳು ಈ ಲಿಂಕ್ ಬಳಸಿ https://www.meaers.com/request/home ನೋಂದಣಿ ಮಾಡುವಂತೆ ರಾಯಭಾರ ಕಚೇರಿ ಒತ್ತಾಯಿಸಿದೆ ಸೂಚಿಸಿದೆ.

ಹಾಗೇ, “ಇರಾನ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಸೂಚನೆ ಬರುವವರೆಗೆ ಭಾರತೀಯ ಪ್ರಜೆಗಳು ಇರಾನ್‌ಗೆ ಪ್ರಯಾಣಿಸಬಾರದು ಎಂದು ಸೂಚಿಸಲಾಗಿದೆ” ಎಂದು ವಿದೇಶಾಂಗ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಕಳೆದ ಕೆಲವು ದಿನಗಳಿಂದ ಡಾಲರ್‌ಗೆ ಹೋಲಿಸಿದರೆ ಕುಸಿಯುತ್ತಿರುವ ಆರ್ಥಿಕತೆ ಮತ್ತು ಕರೆನ್ಸಿ ಮೌಲ್ಯ ಐತಿಹಾಸಿಕ ಗರಿಷ್ಠ ಮಟ್ಟವನ್ನು ತಲುಪಿರುವುದನ್ನು ವಿರೋಧಿಸಿ ಇರಾನ್‌ನ ವಿವಿಧ ಭಾಗಗಳಲ್ಲಿ ಪ್ರತಿಭಟನಾಕಾರರು ಬೀದಿಗಿಳಿದಿದ್ದಾರೆ. ಇದರಿಂದಾಗಿ ಉದ್ವಿಗ್ನತೆ ಹೆಚ್ಚಾಗಿದೆ.