ಗದಗ : ನೂರಾರು ಐತಿಹಾಸಿಕ ಸ್ಮಾರಕ ಹಾಗೂ ದೇವಸ್ಥಾನಗಳನ್ನು ತನ್ನೊಡಲಲ್ಲಿ ಬಚ್ಚಿಟ್ಟುಕೊಂಡಿರುವ ಸ್ಥಳ ಲಕ್ಕುಂಡಿ. ನಿಧಿ ಪತ್ತೆಯಾದ ಬೆನ್ನಲ್ಲೇ ಇದೀಗ ಲಕ್ಕುಂಡಿಯಲ್ಲಿ ಉತ್ಖನನ ಕಾರ್ಯ ಆರಂಭವಾಗಲಿದೆ. ಲಕ್ಕುಂಡಿ ಕೋಟೆ ವೀರಭದ್ರೇಶ್ವರ ದೇವಸ್ಥಾನ ಬಳಿ ಉತ್ಖನನಕ್ಕೆ ಪ್ಲಾನ್ ಮಾಡಲಾಗಿದೆ. ಇಂದಿನಿಂದ ಲಕ್ಕುಂಡಿಯಲ್ಲಿ ಉತ್ಖನನ ಆರಂಭ ಆಗಲಿದೆ.
ಗದಗ ಜಿಲ್ಲೆಯ ಲಕ್ಕುಂಡಿ ತನ್ನದೆ ಆದ ಇತಿಹಾಸವನ್ನು ಹೊಂದಿದೆ. ಕಲ್ಯಾಣ ಚಾಲುಕ್ಯರ, ರಾಷ್ಟ್ರಕೂಟರ, ಹೊಯ್ಸಳರು, ಕಳಚೂರಿಗಳು, ವಿಜಯನಗರ ಅರಸರು, ದಾನಚಿಂತಾಮಣಿ ಅತ್ತಿಮಬ್ಬೆ ಆಳಿದ ನಾಡು. ಈ ನಾಡು ಕೇವಲ ಶಿಲ್ಪಕಲೆಗೆ ಅಷ್ಟೇ ಹೆಸರಾಗಿಲ್ಲ. ಸಾಕಷ್ಟು ಚಿನ್ನ, ಬೆಳ್ಳಿ, ವಜ್ರ, ವೈಢೂರ್ಯಗಳ ಸಂಪತ್ತನ್ನು ತನ್ನೊಡಲೊಳಗೆ ಲೆಕ್ಕವಿಲ್ಲದಷ್ಟು ಹುದುಗಿಟ್ಟುಕೊಂಡಿದೆ.
ಲಕ್ಕುಂಡಿಯಲ್ಲಿ ನಿಧಿ ಸಿಕ್ಕಿದ್ದ ಬೆನ್ನಲ್ಲೇ ಈಗ ಮತ್ತೊಮ್ಮೆ ಉತ್ಖನನಕ್ಕೆ ಮುಂದಾಗಿದೆ. ಪ್ರವಾಸೋದ್ಯಮ ಇಲಾಖೆ, ಪುರಾತತ್ವ, ವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಲಕ್ಕುಂಡಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರ ಹಾಗೂ ಜಿಲ್ಲಾಡಳಿತ ಸಹಯೋಗದಲ್ಲಿ ಉತ್ಪನನ ನಡೆಯಲಿದೆ. ಲಕ್ಕುಂಡಿಯಲಿ ಈಗಾಗಲೇ 2024ರ ನವೆಂಬರ್ ತಿಂಗಳಿನಲ್ಲಿ ನಡೆದ ಅನ್ವೇಷಣೆಯಲ್ಲಿ ಸಾವಿರಾರು ಪ್ರಾಚೀನ ಅವಶೇಷಗಳು ಪತ್ತೆಯಾಗಿದ್ದವು. ಈಗ ನಿಧಿ ಪತ್ತೆಯಾಗಿದೆ. ಅನೇಕ ಭಾಗಗಳಲ್ಲಿ ನೀಲಮಣಿ, ಮುತ್ತು, ರತ್ನ, ಹವಳ, ವಜ್ರ, ವೈಡೂರ್ಯದಂತಹ ಅನೇಕ ವಸ್ತುಗಳು ಇಂದಿಗೂ ದೊರೆಯುತ್ತಿವೆ.
ಆದ್ದರಿಂದ ಈ ಲಕ್ಕುಂಡಿಯ ಒಡಲಿನಲ್ಲಿ ಹುದುಗಿರುವ ಅವಶೇಷಗಳ ಬಗ್ಗೆ ಮತ್ತಷ್ಟು ಕುತೂಹಲ ಹೆಚ್ಚಿಸುವಂತೆ ಮಾಡಿದೆ. ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನ ಆವರಣದಲ್ಲಿ ಅಂದಾಜು 5,388 ಚದರ ಅಡಿ ವ್ಯಾಪ್ತಿಯಲ್ಲಿ ಉತ್ಪನನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. 2004-05ರಲ್ಲಿ ಲಕ್ಕುಂಡಿಯ ಪ್ರಭುದೇವರ ಮಠದ ದಕ್ಷಿಣ ಭಾಗದಲ್ಲಿ ಉತ್ಖನನ ನಡೆದಿತ್ತು. ಕಲ್ಯಾಣ ಚಾಲುಕ್ಯರ ಕಾಲದ ಅನೇಕ ಕುರುಹುಗಳು ಆಗ ಪತ್ತೆಯಾಗಿದ್ದವು. ಈಗ ಮತ್ತೆ ಉತ್ಪನನ ಅತೀ ಮಹತ್ವ ಪಡೆದುಕೊಳ್ಳಲಿದೆ. ಉತ್ಖನನ ವೇಳೆ ಇತಿಹಾಸಕ್ಕೆ ಸಂಬಂಧಿಸಿದ ಸ್ಮಾರಕಗಳು, ಶಾಸನಗಳು, ಶಿಲ್ಪಕಲೆಗಳು, ಆಭರಣಗಳು ದೊರೆಯುವ ಸಾಧ್ಯತೆಗಳಿವೆ.















