ರಾಯಚೂರು : ದೇವದುರ್ಗ ತಿಂಥಣಿ ಬ್ರಿಜ್ಡ್ ಕಾಗಿನೆಲೆ ಕನಕಗುರುಪೀಠದ ಸಿದ್ದರಾಮನಂದ ಸ್ವಾಮೀಜಿ (50) ವಿಧಿವಶರಾಗಿದ್ದಾರೆ. ಇಂದು ಬೆಳಗಿನ ಜಾವ 3:30ರ ವೇಳೆ ಹೃದಯ ಸ್ತಂಭನದಿಂದ ಅಸ್ತಂಗತರಾಗಿದ್ದಾರೆ. ಲವಲವಿಕೆಯಿಂದ ಓಡಾಡಿಕೊಂಡಿದ್ದ ಸ್ವಾಮೀಜಿ ಇದೇ ಜ.12, 13, 14 ರಂದು ಅದ್ದೂರಿಯಾಗಿ ಹಾಲುಮತ ಸಂಸ್ಕೃತಿ ವೈಭವ ಕಾರ್ಯಕ್ರಮ ನಡೆಸಿದ್ದರು. ಹಾಲುಮತ ಸಾಹಿತ್ಯ ಸಮ್ಮೇಳನ ಹಾಗೂ ಹಾಲುಮತ ಪೂಜಾರಿಗಳ ಶಿಬಿರ ಅದ್ದೂರಿಯಾಗಿ ನಡೆದಿತ್ತು. ಮೊದಲ ಬಾರಿಗೆ ರಾಜಕೀಯ ವ್ಯಕ್ತಿಗಳಿಂದ ಮುಕ್ತವಾದ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು.
ಕಳೆದ ಒಂದು ವಾರದಿಂದ ಸರಿಯಾಗಿ ಊಟ, ನಿದ್ದೆ ಮಾಡದೇ ಕಾರ್ಯಕ್ರಮಲ್ಲಿ ಭಾಗಿಯಾಗಿದ್ದರಿಂದ ಬುಧವಾರ ರಾತ್ರಿ ಲೋ ಬಿಪಿಯಿಂದ ಸ್ವಾಮೀಜಿ ಬಳಲಿದ್ದರು. ಕೂಡಲೇ ಅವರನ್ನು ಲಿಂಗಸುಗೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ ಮೃತಪಟ್ಟಿದ್ದಾರೆ. ಸಿದ್ದರಾಮಾನಂದ ಸ್ವಾಮೀಜಿ ಮೂಲತಃ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಕಲಮರಹಳ್ಳಿಯವರು. ಮಹದೇವಯ್ಯ ಮತ್ತು ಜಯಮ್ಮ ದಂಪತಿಯ 2ನೇ ಪುತ್ರನಾಗಿ ಜನಿಸಿದ್ದ ಇವರ ಮೂಲ ಹೆಸರು ಮೋಹನ್ ಪ್ರದಾನ ಆಗಿತ್ತು. 18ನೇ ವಯಸ್ಸಿಗೆ ಮನೆ ತೊರೆದಿದ್ದ ಇವರು ಜೈನ, ಕ್ರೈಸ್ತ, ಬ್ರಹ್ಮಕುಮಾರಿ ಪಂಥಗಳ ಪ್ರಭಾವಕ್ಕೆ ಒಳಗಾಗಿದ್ದರು.
ಶರಣ ಸಾಹಿತ್ಯದ ಜೊತೆಗೆ ಎಲ್ಲಾ ಧರ್ಮಗಳ ಅಧ್ಯಯನ ಮಾಡಿದ ಸ್ವಾಮೀಜಿಗಳು ಚಿತ್ರದುರ್ಗದ ಮುರುಘಾಮಠದಲ್ಲಿ ಕೆಲ ಕಾಲ ಅಧ್ಯಯನ ಅ ಬಳಿಕ ನಾಲ್ಕು ವರ್ಷಗಳ ಕಾಲ ಸಿಂಧನೂರಿನಲ್ಲಿ ಸ್ವಾಮೀಜಿಯಾಗಿ ವಾಸ್ತವ್ಯ ಮಾಡಿದರು. ಬಳಿಕ ದೇವದುರ್ಗ ತಾಲ್ಲೂಕಿನ ತಿಂಥಣಿ ಬ್ರಿಜ್ಡ್ ಹತ್ತಿರ 2011 ರಲ್ಲಿ ಕನಕಗುರು ಪೀಠಕ್ಕೆ ಬಂದ ಸಿದ್ದರಾಮನಂದ ಸ್ವಾಮೀಜಿ ಕಾಗಿನೆಲೆ ಕನಕ ಗುರುಪೀಠ ಸ್ಥಾಪನೆ ಮಾಡಿದರು.
ಕಲಬುರಗಿ ವಿಭಾಗದ ಕನಕ ಗುರು ಪೀಠ ಪ್ರಾರಂಭಿಸಿ ಪ್ರತಿ ವರ್ಷ ಜನವರಿ 12, 13, 14 ಹಾಲುಮತ ಸಂಸ್ಕೃತಿ ವೈಭವ ನಡೆಸುತ್ತಿದ್ದರು. ಶಾಲಾ ಮಕ್ಕಳಿಗೆ ಉಚಿತ ದಾಸೋಹದ ವ್ಯವಸ್ಥೆ, ಕನಕಗುರು ಪೀಠದಲ್ಲಿ ಸಾಮೂಹಿಕ ವಿವಾಹ, ಆರೋಗ್ಯ ಶಿಬಿರ, ರಕ್ತದಾನ ಆಯೋಜನೆ ಮಾಡಿಸುತ್ತಿದ್ದರು. ಸಾಹಿತ್ಯ, ಸಮಾಜಸೇವೆ ಮಾಡಿದ ಗಣ್ಯರಿಗೆ ಭಾಸ್ಕರ, ಕನಕರತ್ನ, ಸಿದ್ಧ ಶ್ರೀ ಪ್ರಶಸ್ತಿ ನೀಡಿ ಗೌರವಿಸುತ್ತಿದ್ದರು.















