ಮಡಿಕೇರಿ : ಜಿಲ್ಲೆಯ ಕೆಲವೆಡೆ ಚಿರತೆ ಕಾಟ ಹೆಚ್ಚಾಗಿದೆ. ಇದರ ನಡುವೆ ಪುರಸಭಾ ಅಧಿಕಾರಿಗಳು ಬೀದಿನಾಯಿ ಪುನರ್ವಸತಿ ಕೇಂದ್ರ ಸ್ಥಾಪನೆಗೆ ಮುಂದಾಗಿದ್ದು, ಗ್ರಾಮಸ್ಥರ ವಿರೋಧ ವ್ಯಕ್ತಪಡಿಸಿದ್ದಾರೆ.
ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಮರೂರು ಅಕ್ಕೆ ಗ್ರಾಮದ ನೂರಾರು ಕುಟುಂಬಗಳಿಗೆ ನಾಯಿ ಬಾಯಿಯಿಂದ ಚಿರತೆ ಬಾಯಿಗೆ ಬೀಳುವಂತಹ ಸ್ಥಿತಿ ಎದುರಾಗುತ್ತಿದೆ. ಇಂತಹ ಸ್ಥಿತಿಗೆ ಕಾರಣ ಕೊಡಗು ಜಿಲ್ಲೆ ಕುಶಾಲನಗರ ಪುರಸಭಾ ಆಡಳಿತ ಮಾಡಲು ಹೊರಟಿರುವ ನಾಯಿ ಪುನರ್ವಸತಿ ಕೇಂದ್ರ. ನ್ಯಾಯಾಲಯ ಈಗಾಗಲೇ ಬೀದಿ ನಾಯಿಗಳಿಂದ ಜನರನ್ನು ರಕ್ಷಿಸಿ, ಅದಕ್ಕಾಗಿ ಪುನರ್ವಸತಿ ಕೇಂದ್ರ ಸ್ಥಾಪಿಸಿ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ.
ನ್ಯಾಯಾಲಯದ ಆದೇಶವನ್ನು ಪಾಲಿಸಲು ಹೊರಟಿರುವ ಕೊಡಗು ಜಿಲ್ಲೆಯ ಕುಶಾಲನಗರ ಪುರಸಭಾ ಅಧಿಕಾರಿಗಳು ತಾಲ್ಲೂಕಿನ ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರೂರು ಎಂಬಲ್ಲಿ ಬೀದಿನಾಯಿ ಪುನರ್ವಸತಿ ಕೇಂದ್ರ ಸ್ಥಾಪಿಸಲು ಮುಂದಾಗಿದೆ. ವಿಪರ್ಯಾಸವೆಂದರೆ ಮರೂರು, ಅಕ್ಕೆ ಸೇರಿದಂತೆ ಹಲವು ಗ್ರಾಮಗಳ ಸುತ್ತಮುತ್ತ ಸಂರಕ್ಷಿತಾರಣ್ಯ ಇದೆ. ಈ ಅರಣ್ಯದಲ್ಲಿ ಹುಲಿ ಮತ್ತು ಚಿರತೆಗಳ ಸಂಖ್ಯೆ ತೀವ್ರವಾಗಿದೆ. ಈಗಾಗಲೇ ಈ ಕಾಡಿನಿಂದ ಹಲವು ಆಗಿಂದಾಗ್ಗೆ ಚಿರತೆ ಮತ್ತು ಹುಲಿಗಳು ಗ್ರಾಮಗಳತ್ತ ಬರುತ್ತಿವೆ ಎಂದು ಗ್ರಾಮಸ್ಥರು ತಮ್ಮ ಅಳನ್ನು ವ್ಯಕ್ತಿಪಡಿಸಿದ್ದಾರೆ.
ಈ ನಡುವೆ ಗ್ರಾಮದಲ್ಲಿ ಚಿರತೆ, ಹುಲಿಗಳ ಕಾಟ ಹೆಚ್ಚಾಗಿದೆ. ಇದರ ಜೊತೆಗೆ ಬೀದಿನಾಯಿಗಳ ಪುನರ್ವಸತಿ ಕೇಂದ್ರ ಆರಂಭಿಸಿದರೆ ಅವುಗಳ ಶಬ್ಧ ಮತ್ತು ವಾಸನೆಯಿಂದ ಹುಲಿ ಮತ್ತು ಚಿರತೆಗಳು ಆಹಾರ ಅರಸಿ ಗ್ರಾಮಗಳತ್ತ ನುಗ್ಗಲಿವೆ. ಆದರೆ ನಾಯಿಗಳನ್ನು ಗೇಜ್ ಒಳಗೆ ಹಾಕಿರುವುದರಿಂದ ಅವುಗಳನ್ನು ಹಿಡಿಯಲಾಗದ ಚಿರತೆ, ಹುಲಿಗಳು ಗ್ರಾಮಗಳತ್ತ ನುಗ್ಗಲಿವೆ. ಮರೂರು, ಅಕ್ಕೆ ಹುಲುಸೆ ಗ್ರಾಮಗಳಲ್ಲಿ ಅಲ್ಲಲ್ಲಿ ದೂರ, ದೂರದಲ್ಲಿ ಒಂದೊಂದು ಮನೆಗಳಿದ್ದು ಜನರ ಮೇಲೆ ಹುಲಿ, ಚಿರತೆಗಳು ದಾಳಿ ಮಾಡುವ ಸಾಧ್ಯತೆ ಹೆಚ್ಚಿದೆ.
ಇದರಿಂದ ಮಾನವ ಪ್ರಾಣ ಹಾನಿಯಾಗುವುದರಲ್ಲಿ ಯಾವುದೇ ಅನುಮಾನಗಳಿಲ್ಲ. ನಾಯಿ ಪುನರ್ವಸತಿ ಕೇಂದ್ರ ಸ್ಥಾಪನೆ ಮಾಡಲು ಉದ್ದೇಶಿಸಿರುವ ಜಾಗದಿಂದ ನೂರು ಮೀಟರ್ ದೂರದಲ್ಲೇ ಅಂಗನವಾಡಿ ಇದೆ. ಇದರಿಂದ ಪುಟಾಣಿ ಮಕ್ಕಳಿಗೂ ಇದರಿಂದ ತೊಂದರೆಯಾಗಲಿದ್ದು, ಯಾವುದೇ ಕಾರಣಕ್ಕೂ ಅಲ್ಲಿ ಪುನರ್ವಸತಿ ಕೇಂದ್ರ ಮಾಡಬಾರದು ಎಂದು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕೆಲಸ ಆರಂಭಿಸಲು ಬಂದ ಜೆಸಿಬಿಯನ್ನು ತಡೆದು, ವಾಪಸ್ ಕಳುಹಿಸಿದ್ದಾರೆ.
ಅಲ್ಲದೇ ಹೆಬ್ಬಾಲೆ ಗ್ರಾಮ ಪಂಚಾಯಿತಿಯಿಂದಲೂ ನಡಾವಳಿ ಮಾಡಿ ಇಲ್ಲಿ ನಾಯಿ ಪುನರ್ವಸತಿ ಕೇಂದ್ರ ಆರಂಭಿಸದಂತೆ ಜಿಲ್ಲಾಡಳಿತ ಮತ್ತು ಸರ್ಕಾರಕ್ಕೆ ಕಳುಹಿಸಿದ್ದಾರೆ. ಇದಕ್ಕೂ ಒಪ್ಪದೆ ಏನಾದರೂ ಕೇಂದ್ರ ಆರಂಭಿಸಲು ಮುಂದಾದರೆ ಅವಿರತ ಹೋರಾಟ, ಅಮರಣಾಂತರ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.















