ಮಂಗಳೂರು/ ಚಿಕ್ಕಬಳ್ಳಾಪುರ : ಶಿಡ್ಲಘಟ್ಟದ ನಗರಸಭೆ ಪೌರಾಯುಕ್ತೆ ಅಮೃತಗೌಡ ಅವರಿಗೆ ಧಮ್ಕಿ ಹಾಕಿದ್ದ ಕಾಂಗ್ರೆಸ್ ಮುಂಖಂಡ ರಾಜೀವ್ ಗೌಡ ಅವರಿಗೆ ತಲೆಮರೆಸಿಕೊಳ್ಳಲು ಸಹಕರಿಸಿದ್ದ ಆರೋಪಿಯನ್ನು ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಮಂಗಳೂರಿನ ಮೈಕಲ್ ಜೋಸೇಫ್ ರೆಗೋ ಎಂದು ತಿಳಿದು ಬಂದಿದೆ. ಪಚ್ಚನಾಡಿ ಬಳಿಯ ಈತನಿಗೆ ಸೇರಿದ್ದ ಜೆ.ಕೆ ಫಾರ್ಮ್ ಹೌಸ್ನಲ್ಲಿ ರಾಜೀವ್ ಗೌಡ ತಲೆಮರೆಸಿಕೊಂಡಿದ್ದ. ಈ ಮಾಹಿತಿ ತಿಳಿದು ಚಿಕ್ಕಬಳ್ಳಾಪುರ ಪೊಲೀಸರು ಅಲ್ಲಿಗೆ ಹೊರಟಿದ್ದರು.
ಈ ವಿಚಾರ ತಿಳಿದು ಆರೋಪಿ ರಾಜೀವ್ ಗೌಡ, ತನ್ನ ಕಾರನ್ನ ಮಂಗಳೂರು ಜಂಕ್ಷನ್ ರೈಲ್ವೇ ನಿಲ್ದಾಣದಲ್ಲಿ ಬಿಟ್ಟು ಮೈಕಲ್ನ ಕಾರಿನಲ್ಲಿ ಕೇರಳಕ್ಕೆ ತೆರಳಿದ್ದ. ಇಬ್ಬರನ್ನೂ ಪೊಲೀಸರು ಕೇರಳದಲ್ಲಿ ಬಂಧಿಸಿದ್ದರು. ಸಚಿವ ಜಮೀರ್ ಪುತ್ರ ಝೈದ್ ಖಾನ್ ನಟನೆಯ ‘ಕಲ್ಟ್’ ಸಿನಿಮಾ ಫ್ಲೆಕ್ಸ್ ತೆರವುಗೊಳಿಸಿದ್ದಕ್ಕೆ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತ ಗೌಡಗೆ ರಾಜೀವ್ ಗೌಡ ಧಮ್ಕಿ ಹಾಕಿದ್ದ.
ಧಮ್ಕಿ ಹಾಕಿದ್ದ ಆಡಿಯೋ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆ ಕ್ಷಮೆ ಕೋರಿದ್ದ. ಆದರೆ ಅಮೃತ ಗೌಡ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಾದ ಬಳಿಕ ಪರಾರಿಯಾಗಿದ್ದ ರಾಜೀವ್ ಜಾಮೀನು ಪಡೆಯಲು ನಾನಾ ಕಸರತ್ತು ನಡೆಸಿದ್ದ. ಕೋರ್ಟ್ ಜಾಮೀನು ವಜಾಗೊಳಿಸಿದ ಬೆನ್ನಲ್ಲೇ ಬಂಧನ ಯಾವಾಗ ಎಂದು ಮಾಧ್ಯಮಗಳು ಸರ್ಕಾರವನ್ನು ಪ್ರಶ್ನಿಸುತ್ತಿದ್ದವು. ಕೊನೆಗೆ 13 ದಿನಗಳ ಬಳಿಕ ಜ.26 ರಂದು ರಾಜೀವ್ ಗೌಡ ಬಂಧನವಾಗಿತ್ತು.















