ಬೆಂಗಳೂರು : ಮನರೇಗಾ ಮರುಜಾರಿಗೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಇಂದು ಕಾಂಗ್ರೆಸ್ ಪಕ್ಷದಿಂದ ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಸಚಿವರು, ಶಾಸಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಕೇಂದ್ರ ಸರ್ಕಾರದ ವಿರುದ್ಧ ‘ಕೈ’ ನಾಯಕರು ಗುಡುಗಿದರು. ಈ ಪ್ರತಿಭಟನೆ ಹಿನ್ನೆಲೆ ನೂರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು. ಬೇರೆ ಬೇರೆ ಭಾಗಗಳಿಂದ ಕಾರ್ಯಕರ್ತರು, ಜನರು ಆಗಮಿಸಿದ್ದರು. ಸಚಿವರಾದ ಎಂ.ಬಿ.ಪಾಟೀಲ್, ದಿನೇಶ್ ಗುಂಡೂರಾವ್, ಚಲುವರಾಯಸ್ವಾಮಿ, ಬೋಸರಾಜು, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಪಾಲ್ಗೊಂಡಿದ್ದರು.
ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಮಾತನಾಡಿ, ಯುಪಿಎ ಸರ್ಕಾರದ ನರೇಗಾ ರದ್ದು ಮಾಡಿದ ವಿರುದ್ಧ ಪ್ರತಿಭಟನೆ ಇದಾಗಿದೆ. 2005ರಲ್ಲಿ ಕಾಂಗ್ರೆಸ್ ಸರ್ಕಾರ ರಾಷ್ಟ್ರದಲ್ಲಿ ನಿರುದ್ಯೋಗ ಸಮಸ್ಯೆ ನಿವಾರಿಸಲು ಮನರೇಗಾ ಜಾರಿಗೆ ತಂದಿತ್ತು. ರಾಷ್ಟ್ರದಲ್ಲಿ ಲಕ್ಷಾಂತರ ಜನರ ಆತ್ಮಹತ್ಯೆ ಆಗ್ತಿತ್ತು. ರೈತರ ನೋವು ಅರಿತು ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಗಾಗಿ ಈ ಕಾನೂನು ಜಾರಿಗೆ ತರಲಾಗಿತ್ತು. 20 ವರ್ಷಗಳ ಕಾಲ ಗ್ರಾಮೀಣ ಕೃಷಿ ಕಾರ್ಮಿಕರಿಗೆ ಉದ್ಯೋಗದ ಹಕ್ಕು ಸಿಗುವಂತಾಯಿತು.
ಈ ಕಾನೂನು ಪ್ರಕಾರ ವರ್ಷಕ್ಕೆ ನೂರು ದಿನಗಳ ಕಾಲ ಉದ್ಯೋಗ ಅವಕಾಶ ಇದೆ. ಉದ್ಯೋಗ ಕೊಡದಿದ್ದರೆ ನಿರುದ್ಯೋಗ ಭತ್ಯೆ ಕೊಡಲು ಅವಕಾಶ ಇದೆ. ಪಂಚಾಯಿತಿಗಳಿಗೆ ಹೆಚ್ಚಿನ ಅವಕಾಶ ನೀಡಲಾಗಿತ್ತು. 90% ಅನುದಾನ ಕೇಂದ್ರ ಸರ್ಕಾರ ನೀಡುತ್ತಿತ್ತು. ಆದರೆ, ಈಗ 100 ದಿನಗಳ ಬದಲಾಗಿ 125 ದಿನ ಮಾಡಲಾಗಿದೆ. ಇದು ಕಣ್ಣೊರೆಸುವ ತಂತ್ರ. ಆದರೆ, ಉದ್ಯೋಗ ನೀಡುವುದು ಕೇಂದ್ರ ಸರ್ಕಾರವಾಗಿದೆ.
ಗ್ರಾಮ ಪಂಚಾಯಿತಿ ಹಕ್ಕನ್ನು ಕಸಿದುಕೊಳ್ಳಲಾಗಿದೆ. ಕೇವಲ ಕೃಷಿ ಚಟುವಟಿಕೆ ಸಂದರ್ಭದಲ್ಲಿ ಮಾತ್ರ ಉದ್ಯೋಗ ಕೊಡಿಸುವ ಕೆಲಸ ಆಗ್ತಿದೆ. ಮಹಾತ್ಮಾ ಗಾಂಧಿ ವಿಚಾರಧಾರೆಗೆ ಕೈಹಾಕ್ತಿದೆ ಬಿಜೆಪಿ. ನಾವು ಎಚ್ಚೆತ್ತುಕೊಂಡಿಲ್ಲ ಎಂದಾದರೆ ಸಂವಿಧಾನ ಮುಗಿಸ್ತಾರೆ. ಕಾಂಗ್ರೆಸ್ ಅವಧಿಯ ಎಲ್ಲಾ ಕಾರ್ಯಕ್ರಮಗಳ ಹೆಸರು ಬದಲಾವಣೆ ಮಾಡಲಾಗಿದೆ. ಮನ್ ಕಿ ಬಾತ್ನಲ್ಲಿ ರೈತರ ಬಗ್ಗೆ ಮೋದಿ ಭಾಷಣ ಮಾಡಿಲ್ಲ ಇದು ರೈತ ವಿರೋಧಿ ನಡೆಯಾಗಿದೆ. ಮಹಾತ್ಮಾ ಗಾಂಧಿ ವಿರುದ್ಧ ದೇವರನ್ನು ನಿಲ್ಲಿಸುವ ಪ್ರಯತ್ನ ಬಿಜೆಪಿ ಮಾಡ್ತಿದೆ ಎಂದು ಹರಿಹಾಯ್ದರು.
ಜಿ ರಾಮ್ ಜಿ ಹೋರಾಟದಲ್ಲಿ ಕಾಂಗ್ರೆಸ್ ನಾಯಕರ ಟವೆಲ್ ಹೋರಾಟ ನಡೆಸಿದರು. ವೇದಿಕೆ ಮೇಲೆ ಇರುವ ಎಲ್ಲಾ ನಾಯಕರಿಗೆ ಟವೆಲ್ ವಿತರಣೆ ಮಾಡಲಾಯಿತು. ಶ್ರಮಿಕರ ಪ್ರತೀಕ ಎಂಬಂತೆ ಎಲ್ಲಾ ನಾಯಕರು ಹೆಗಲಿಗೆ ಟವೆಲ್ ಹಾಕಿಕೊಂಡು ಪ್ರತಿಭಟನೆ ಮಾಡಿದರು. ನಂತರ ಸುರ್ಜೇವಾಲ, ಸಿಎಂ-ಡಿಸಿಎಂ ತಲೆಗೆ ಟವೆಲ್ ಕಟ್ಟಿಕೊಂಡು ಪ್ರತಿಭಟಿಸಿದರು.

ಸಚಿವ ಎಂ.ಬಿ.ಪಾಟೀಲ್ ಮಾತನಾಡಿ, ಮನರೇಗಾ ನಿಷ್ಕ್ರಿಯಗೊಳಿಸಿ ಕೇಂದ್ರ ಸರ್ಕಾರ ಗ್ರಾಮೀಣ ಜನರಿಗೆ ಅನ್ಯಾಯ ಮಾಡಿದೆ. ಸ್ಥಳೀಯವಾಗಿ ಉದ್ಯೋಗ ಸಿಗಬೇಕು ಎಂಬ ಉದ್ದೇಶದಿಂದ ಯೋಜನೆ ಜಾರಿಯಾಯಿತು. ಕೇಂದ್ರ ಸರ್ಕಾರ ಮನರೇಗಾ ರದ್ದು ಮಾಡಿ ಜಿ ರಾಮ್ ಜಿ ತಂದಿದೆ ಗ್ರಾಮೀಣ ಭಾಗದ ಅಭಿವೃದ್ಧಿ ತಪ್ಪಿಸುವ ಮೂಲಕ ಅನ್ಯಾಯ ಮಾಡುತ್ತಿದೆ ಎಂದು ಅಸಮಾಧಾನ ಹೊರಹಾಕಿದರು.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ನಾವು ಅಧಿವೇಶನದ ಸಮಯ ಕಾಲಹರಣ ಮಾಡ್ತಿಲ್ಲ. ಅನ್ಯಾಯದ ವಿರುದ್ಧ ಹೋರಾಟ ಮಾಡ್ತಾ ಇದ್ದೇವೆ. ಮನರೇಗಾ ಬದಲಾವಣೆ ಸರಿ ಅಲ್ಲ. ಹಾಗಾಗಿ ನಾವು ಹೋರಾಟ ಮಾಡ್ತಾ ಇದ್ದೇವೆ. ಮನರೇಗಾದಲ್ಲಿ ಭ್ರಷ್ಟಾಚಾರ ಆಗಿದೆ ಅಂದರೆ, 11 ವರ್ಷ ಬೇಕಾಯ್ತಾ ಮನರೇಗಾ ದಲ್ಲಿ ಭ್ರಷ್ಟಾಚಾರ ಆಗಿದೆ ಅಂತಾ ತಿಳಿದುಕೊಳ್ಳೋದಕ್ಕೆ. ಸುಮ್ನೆ ಏನೋ ಹೇಳಬಾರದು ಎಂದು ಕೇಂದ್ರದ ವಿರುದ್ಧ ಗುಡುಗಿದರು.
ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿ, ಯಾರಿಗೆ ಕೂಲಿ ಇಲ್ಲ ಉದ್ಯೋಗ ಇಲ್ಲ ಅವರಿಗೆ ಉದ್ಯೋಗ ಕೊಟ್ಟಿದ್ದು ಸೋನಿಯಾ ನೇತೃತ್ವದಲ್ಲಿ ಮನಮೋಹನ್ ಸಿಂಗ್ ಸರ್ಕಾರ. 2013 ರಲ್ಲಿ ವಿಶ್ವ ಬ್ಯಾಂಕ್ ನರೇಗಾ ಯೋಜನೆ ಅತ್ಯುತ್ತಮ ಯೋಜನೆ ಅಂತ ಸರ್ಟಿಫಿಕೇಟ್ ಕೊಟ್ಟಿತ್ತು. ಗಾಂಧಿ ಹೆಸರನ್ನು ತೆಗೆದುಹಾಕಿ ಹೊಸ ರೂಪ ನೀಡಿದ್ದಾರೆ. 60% ಕೇಂದ್ರ ಅಂತೆ, 40% ನಾವಂತೆ. ಬಿಜೆಪಿಯವರು ಏನೇನು ಮಾತಾಡ್ತಾರೋ ನೋಡೋಣ.
ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ಮಾಡ್ತಿದ್ದಾರೆ ಬಿಜೆಪಿಯವರು. ಎಲ್ಲಾದ್ರೂ ಉಂಟೇನ್ರಿ? ಬಿಜೆಪಿಯವರು ಗಾಂಧಿ ಮುಂದೆ ಕೂತ್ಕೊಳೋ ನೈತಿಕತೆ ಇದೆಯೇನ್ರಿ? ಗೋಡ್ಸೆ ಮಾಹಾತ್ಮ ಗಾಂಧಿಯನ್ನ ಕೊಂದಿದ್ದಲ್ಲ ಬಿಜೆಪಿಯವರು ಕೊಲ್ತಾ ಇದ್ದಾರೆ. ಬಿಜೆಪಿಯವರು ಗ್ರಾಮೀಣ ಜನರಿಗೆ ರೋಗ ತರುತ್ತಿದೆ. ನಾವು ಜೈಲಿಗೆ ಹೋಗೋದಕ್ಕೂ ರೆಡಿ ಇದ್ದೀವಿ. ಸಚಿವರೆಲ್ಲ ಜೈಲಿಗೆ ಹೋಗ್ತೀವಿ ನರೇಗಾ ಯೋಜನೆಗಾಗಿ ಎಂದು ಗುಡುಗಿದರು.
ಸಿಎಂ ಸಿದ್ದರಾಮಯ್ಯ ಮಾತನಾಡಿ, ನಮ್ಮನ್ನ ಕೇಳದೆ ರಾಜಭವನವನ್ನು ಲೋಕಭವನ ಅಂತ ಮಾಡಿದ್ದಾರೆ. ನಾನು ರಾಜಭವನ ಅಂತಾನೆ ಕರೆಯೋದು, ನಾವು ರಾಜಭವನ ಚಲೋ ಮಾಡ್ತೀವಿ. ಕೋರ್ಟ್ ಆದೇಶ ಇದೆ ಎಲ್ಲರೂ ಹೋಗೋಗೆ ಆಗಲ್ಲ. ನಾವು ಬಸ್ಸಲ್ಲಿ ಹೋಗುತ್ತೇವೆ ಎಂದರು. ಕಾಂಗ್ರೆಸ್ ಪ್ರತಿಭಟನಾಕಾರರಿಂದ ಲೋಕಭವನಕ್ಕೆ ಮುತ್ತಿಗೆ ಹಿನ್ನೆಲೆ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಲೋಕಭವನದ ಬಳಿ 150 ಪೊಲೀಸರನ್ನು ನಿಯೋಜಿಸಲಾಗಿತ್ತು. ಜಂಟಿ ಪೊಲೀಸ್ ಆಯುಕ್ತ ವಂಶಿಕೃಷ್ಣ, ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್ ಎಂ ಹಾಕೆ, ಪಶ್ಚಿಮ ವಿಭಾಗ ಡಿಸಿಪಿ ಯತೀಶ್, ಟ್ರಾಫಿಕ್ ವೆಸ್ಟ್ ಡಿಸಿಪಿ ಅನೂಪ್ ಶೆಟ್ಟಿ, ಈಸ್ಟ್ ಟ್ರಾಫಿಕ್ ಡಿಸಿಪಿ ಸಾಹಿಲ್ ಬಾಗ್ಲಾ ನೇತೃತ್ವದಲ್ಲಿ ಬಂದೋಬಸ್ತ್ ಕಲ್ಪಿಸಲಾಗಿತ್ತು.















