ಮನೆ ರಾಜ್ಯ ಉದ್ಯಮಿ ಮನೆಯಲ್ಲಿ ಚಿನ್ನಾಭರಣ ಲೂಟಿ – ಮನೆಗೆಲಸದವರಿಂದಲೇ ಕಳ್ಳತನ..!

ಉದ್ಯಮಿ ಮನೆಯಲ್ಲಿ ಚಿನ್ನಾಭರಣ ಲೂಟಿ – ಮನೆಗೆಲಸದವರಿಂದಲೇ ಕಳ್ಳತನ..!

0

ಬೆಂಗಳೂರು : 20 ದಿನಗಳ ಹಿಂದಷ್ಟೇ ಉದ್ಯಮಿ ಮನೆಗೆ ಕೆಲಸಕ್ಕೆ ಬಂದ ನೇಪಾಳ ಮೂಲದ ದಂಪತಿಗಳು ಮಾಲೀಕರು ಹೊರಗೆ ಹೋಗಿದ್ದಾಗ ಬರೋಬ್ಬರಿ 18 ಕೋಟಿ ಮೌಲ್ಯದ 11.5 ಕೆಜಿ ಚಿನ್ನಾಭರಣ ಕದ್ದೊಯ್ದಿದ್ದಾರೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕಳ್ಳತನ ಪ್ರಕರಣಗಳಲ್ಲಿ ನೇಪಾಳ ಮೂಲದ ಮನೆ ಕೆಲಸಗಾರ ಪಾತ್ರವೇ ಹೆಚ್ಚಾಗಿದೆ. ಅದೇ ರೀತಿ ಯಮಲೂರಿನಲ್ಲಿ ಉದ್ಯಮಿ ಶಿವಕುಮಾರ್ ಅವರ ಬಂಗಲೆಯನ್ನ ನೇಪಾಳ ದಂಪತಿಗಳು ಗುಡಿಸಿ ಗುಂಡಾಂತರ ಮಾಡಿದ್ದಾರೆ.

ಉದ್ಯಮಿ ಫಾರಿನ್ ಟ್ರಿಪ್‌ ಹೋಗಿದ್ರು. ಜನವರಿ 25 ರಂದು ಹೆಂಡ್ತಿ ಮಕ್ಕಳು ಸಂಬಂಧಿಕರ ಫಂಕ್ಷನ್ ಗೆ ಹೋಗಿದ್ದಾಗ 18 ಕೋಟಿ ರೂ. ಮೌಲ್ಯದ 11.5 ಕೆಜಿ ಚಿನ್ನ, ವಜ್ರ, ಬೆಳ್ಳಿ ಮತ್ತು 11 ಲಕ್ಷ ನಗದು ಕಳ್ಳತನ ಮಾಡಿ ನೇಪಾಳದ ಕಡೆ ಎಸ್ಕೇಪ್ ಆಗಿದ್ದಾರೆ. ಹಣ, ಒಡವೆ ಕಳೆದುಕೊಂಡ ದಂಪತಿಗಳೀಗ ಕಂಗಾಲಾಗಿದ್ದಾರೆ.

ಕಳೆದ ಇಪ್ಪತ್ತು ದಿನಗಳ ಹಿಂದೆ ನೇಪಾಳ ಮೂಲದ ದಿನೇಶ್ ಮತ್ತು ಕಮಲಾ ದಂಪತಿ ಉದ್ಯಮಿ ಮನೆಯಲ್ಲಿ ಮನೆಗೆಲಸಕ್ಕೆ ಸೇರಿದ್ರು. ಈ ಹಿಂದೆ ಬಿಲ್ಡರ್ ಮನೆಯಲ್ಲಿ ಕೆಲಸ ಮಾಡುತ್ತಿದ್ದ ನೇಪಾಳ ಮೂಲದ ಮಾಯಾ ಮತ್ತು ವಿಕಾಸ್ ದಂಪತಿ ಮೂಲಕ ಮನೆ ಕೆಲಸಕ್ಕೆ ಸೇರಿಕೊಂಡಿದ್ರು. ಮಾಯಾ ಮತ್ತು ವಿಕಾಸ್ ಸುಮಾರು 7-8 ತಿಂಗಳ ಕಾಲ ನಂಬಿಕೆಯಿಂದ ಕೆಲಸ ಮಾಡಿದ್ದರು.

ಆದರೆ, ಕಳೆದ ತಿಂಗಳು ಇದ್ದಕ್ಕಿದ್ದಂತೆ ಊರಿಗೆ ಹೋಗಬೇಕು ಎಂದು ಹೇಳಿ ಕೆಲಸ ಬಿಟ್ಟಿದ್ದರು. ಇವರೇ ಕಮಲಾ ಮತ್ತು ದಿನೇಶ್ ಅವರನ್ನು ಕೆಲಸಕ್ಕೆ ಸೇರಿಸಿದ್ದರು. ಮಾಯಾ ಮತ್ತು ವಿಕಾಸ್ ದಂಪತಿಯೇ ಕಳ್ಳತನಕ್ಕೆ ಪಕ್ಕಾ ಯೋಜನೆ ರೂಪಿಸಿ, ದಿನೇಶ್ ಮತ್ತು ಕಮಲಾ ಅವರನ್ನು ಬಳಸಿಕೊಂಡು ಕೃತ್ಯ ಎಸಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಮನೆ ಮಾಲೀಕರು ಎಲ್ಲಾ ಅನುಮಾನಿತರ ವಿರುದ್ಧ ದೂರು ನೀಡಿದ್ದು, ಮಾರತ್ತಹಳ್ಳಿ ಪೊಲೀಸರು ಈಗಾಗಲೇ ಓರ್ವ ಶಂಕಿತನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಉಳಿದ ಆರೋಪಿಗಳನ್ನ ಪತ್ತೆಹಚ್ಚಲು ವಿಶೇಷ ತಂಡ ರಚಿಸಲಾಗಿದ್ದು, ಅವರ ಬಂಧನಕ್ಕಾಗಿ ಕಾರ್ಯಾಚರಣೆ ಮುಂದುವರಿದಿದೆ.